ಮೈಸೂರು: ತಲೆಮೇಲೆ ಮಲ ಹೊರುವ ಪದ್ಧತಿ ಇಲ್ಲ
ಮೈಸೂರು: ಮೈಸೂರು ನಗರದಲ್ಲಿ ತಲೆಮೇಲೆ ಮಲಹೊರುವ ಪದ್ಧತಿ ಇಲ್ಲವೆಂದು ಮಹಾನಗರ ಪಾಲಿಕೆ ಆಯುಕ್ತ ಕೆ.ಎಸ್. ರಾಯ್ಕರ್ ನಗರಾಭಿವೃದ್ಧಿ ಸಚಿವ ಎಸ್. ಸುರೇಶ್‌ಕುಮಾರ್ ಅವರಿಗೆ ಇಂದು ಮಾಹಿತಿ ನೀಡಿದರು.
ಸಚಿವ ಸುರೇಶ್‌ಕುಮಾರ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಏಳು ಮಹಾನಗರ ಪಾಲಿಕೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ, ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಪ್ರಸ್ತಾಪಿಸಿ ಕೇಳಿದ ಪ್ರಶ್ನೆಗೆ ಅವರು ಈ ಮಾಹಿತಿ ನೀಡಿದರು.
ಸವಣೂರು ಘಟನೆ ನಂತರ ಮೈಸೂರಿನಲ್ಲಿಯೂ ತಲೆಮೇಲೆ ಮಲ ಹೊರುವ ಪದ್ಧತಿ ಇರುವುದಾಗಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಬಗ್ಗೆ ವಾಸ್ತವಿಕ ಮಾಹಿತಿ ನೀಡಿ ಎಂದು ಸಚಿವರು ಕೇಳಿದರು.
ಮೈಸೂರಿನ ರಾಜೀವ್‌ನಗರ, ಮಹದೇವಪುರ, ಕೆ.ಆರ್.ಮಿಲ್ ಪ್ರದೇಶಗಳಲ್ಲಿ ಈ ಪದ್ಧತಿ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾದ ಕೂಡಲೇ, ತಾವು ಮೇಯರ್ ಹಾಗೂ ಅಧಿಕಾರಿಗಳ ಜತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಸಾರ್ವಜನಿಕರಿಂದ ಮಾಹಿತಿ ಪಡೆದಿದ್ದೇವೆ. ಯಾರೂ ಸಹ ತಲೆಮೇಲೆ ಮಲ ಹೊರುವ ಪದ್ಧತಿ ಇದೆ ಎಂದು ತಿಳಿಸಿರುವುದಿಲ್ಲ ಎಂದು ರಾಯ್ಕರ್ ಹೇಳಿದರು.
ಕರ್ನಾಟಕ ನಗರ ಮೂಲಭೂತ ಸೌಕರ್ಯ ಯೋಜನೆಯಡಿ ಹೊರವಲಯದಲ್ಲಿ ನಿರ್ಮಿಸಲಾದ ಮನೆಗಳಿಗೆ ಸಹ ಎರಡು ಇಂಗು ಗುಂಡಿ ಮಾದರಿ ಶೌಚಾಲಯಗಳನ್ನು ನಿರ್ಮಿಸಿಕೊಡಲಾಗಿದೆ. ಇಂಗುಗುಂಡಿ ಪೂರ್ಣ ಒಣಗಿದ ಗೊಬ್ಬರದ ಹಂತಕ್ಕೆ ಬಂದ ನಂತರವೇ ಅದನ್ನು ಸ್ವಚ್ಚಗೊಳಿಸಲಾಗುತ್ತದೆ. ಇದನ್ನು ತಲೆಮೇಲೆ ಮಲ ಹೊರುವ ಪದ್ದತಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ರಾಯ್ಕರ್ ತಿಳಿಸಿದರು.
ಒಳಚರಂಡಿ ಸ್ವಚ್ಚಗೊಳಿಸುವುದನ್ನು ಯಾಂತ್ರೀಕರಿಸಲಾಗಿದ್ದು, ಅದಕ್ಕೆ ಅಗತ್ಯವಾದ ಉಪಕರಣಗಳು ಮಹಾನಗರ ಪಾಲಿಕೆ ಬಳಿ ಇವೆ. ಅವುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಯ್ಕರ್ ಸ್ಪಷ್ಟಪಡಿಸಿದರು.
Rate this article



del.icio.us
Digg
Comments (0 posted):
Post your comment