SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ಬಳ್ಳಾರಿ ರೆಡ್ಡಿಗಳಿಂದ ಕಾಂಗ್ರೇಸ್ ವಿರುದ್ದ ರಣಕಹಳೆ ಬಳ್ಳಾರಿ ರೆಡ್ಡಿಗಳಿಂದ ಕಾಂಗ್ರೇಸ್ ವಿರುದ್ದ ರಣಕಹಳೆ ================================================================================ yammar manvi on 28 July, 2010 06:20:00 ಬೆಂಗಳೂರು,ಜು,೨೮-ಬಳ್ಳಾರಿ ಟು ಮೈಸೂರು ಪಾದಯಾತ್ರೆಯನ್ನು ರದ್ದು ಮಾಡಿದ ಪಕ್ಷದ ವರಿಷ್ಟರ ತೀರ್ಮಾನಕ್ಕೆ ಸೆಡ್ಡು ಹೊಡೆದಿರುವ ಗಣಿರೆಡ್ಡಿಗಳ ಪಡೆ ಬಳ್ಳಾರಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ವಿರುದ್ಧ ಹೋರಾಟ ಆರಂಭಿಸಿದೆ. ತಲೆ ಬೋಳಿಸಿಕೊಂಡು, ಕಪ್ಪು ಬಟ್ಟೆ ಧರಿಸಿಕೊಂಡ ಆರೋಗ್ಯ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಗಣಿರೆಡ್ಡಿಗಳ ಪಡೆಯ ಸಚಿವರು, ಶಾಸಕರು ಇಂದು ದುರ್ಗಮ್ಮನ ಗುಡಿಗೆ ಹೋಗಿ ಪೂಜೆ ಸಲ್ಲಿಸುವ ಮೂಲಕ ಕಾಂಗ್ರೆಸ್ ವಿರುದ್ಧ ರಣಕಹಳೆ ಊದಿದರು. ವರಮಹಾಲಕ್ಷ್ಮಿ ಹಬ್ಬದ ದಿನದವರೆಗೂ ನಿರಂತರ ಹೋರಾಟ ನಡೆಯಲಿದ್ದು,ಈ ಅವಧಿಯಲ್ಲಿ ತಾವು ನೆಲದ ಮೇಲೆ ಮಲಗಿ,ಸಸ್ಯಾಹಾರವನ್ನಷ್ಟೇ ಸೇವಿಸಿ,ಬರಿಗಾಲಲ್ಲಿ ನಡೆಯುವುದಾಗಿ ಪ್ರಕಟಿಸಿದ ಸಚಿವ ಶ್ರೀರಾಮುಲು, ಬಳ್ಳಾರಿಯ ಮೇಲೆ ಕಾಂಗ್ರೆಸ್ಸಿಗರ ಕೆಟ್ಟ ದೃಷ್ಟಿ ಬೀಳದಿರಲಿ ಎಂಬ ಕಾರಣಕ್ಕಾಗಿ ಈ ದೃಷ್ಟಿ ಬೊಟ್ಟಿನ ರೂಪದಲ್ಲಿ ಕಾಣಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಏಕಕಾಲಕ್ಕೆ ಬಿಜೆಪಿ ನಾಯಕರು ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಾಯಕರ ಲೆಕ್ಕಾಚಾರಗಳನ್ನು ಮೀರಿ ಗಣಿರೆಡ್ಡಿಗಳ ಹೋರಾಟ ಆರಂಭವಾಗಿದ್ದು ಗಣಿ ನಾಡಿನಲ್ಲಿ ಭಾರೀ ರಾದ್ದಾಂತಕ್ಕೆ ವೇದಿಕೆ ಸಜ್ಜಾಗಿದೆ. ಇಂದು ಮಧ್ಯಾಹ್ನ ಸಚಿವ ಬಿ.ಶ್ರೀರಾಮುಲು,ಕರುಣಾಕರ ರೆಡ್ಡಿ, ಜನಾರ್ಧನರೆಡ್ಡಿ, ಶಾಸಕರಾದ ಆನಂದ್‌ಸಿಂಗ್, ಸುರೇಶ್‌ಬಾಬು, ನಾಗೇಂದ್ರ ಸೇರಿದಂತೆ ಗಣಿರೆಡ್ಡಿ ಪಡೆಯ ಸಚಿವರು, ಶಾಸಕರು ಸಭೆ ನಡೆಸಿ ಅಂತಿಮವಾಗಿ ಹೋರಾಟದ ತೀರ್ಮಾನವನ್ನು ಪ್ರಕಟಿಸಿದರು. ತಲೆ ಬೋಳಿಸಿಕೊಂಡು, ಮೀಸೆ ಬೋಳಿಸಿಕೊಂಡು, ಕಪ್ಪು ಬಟ್ಟೆ ಧರಿಸಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಶ್ರೀರಾಮುಲು, ಕಳೆದ ಐವತ್ತು ವರ್ಷಗಳಿಂದ ಭ್ರಷ್ಟಾಚಾರ ನಡೆಸಿ ನೂರಾರು ಕೋಟಿ ನುಂಗಿ ಹಾಕಿದ ಕಾಂಗ್ರೆಸ್ ನಾಯಕರು ಇದೀಗ ಬಳ್ಳಾರಿಯ ಸ್ವಾಭಿಮಾನಕ್ಕೆ ಪೆಟ್ಟು ಕೊಡಲು ಬರುತ್ತಿದ್ದಾರೆ. ಇದನ್ನು ನೋಡಿಕೊಂಡು ಕೈ ಕಟ್ಟಿ ಕೂರಲು ಸಾಧ್ಯವಿಲ್ಲ ಎಂದು ಗುಡುಗಿದರು. ರಾಜ್ಯಪಾಲರು, ರಾಜ್ಯಪಾಲರ ಜತೆ ಸೇರಿದ ಕಾಂಗ್ರೆಸ್ಸಿಗರು ಬಳ್ಳಾರಿಯ ಸ್ವಾಭಿಮಾನವನ್ನು ಕೆಣಕುತ್ತಿದ್ದಾರೆ. ಬಳ್ಳಾರಿಯ ಸಂಸ್ಕೃತಿಯ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. ಪಾದಯಾತ್ರೆ ಮಾಡುವ ಮೂಲಕ ನಮ್ಮನ್ನು ಅಧಿಕಾರದಿಂದ ಇಳಿಸಲು, ಮತ್ತೆ ಅಧಿಕಾರ ಹಿಡಿಯಲು ಪ್ರಯತ್ನ ನಡೆಸುತ್ತಿದ್ದಾರೆ. ಇವರಿಗೆ ತಕ್ಕ ಉತ್ತರ ನೀಡುತ್ತೇವೆ ಎಂದರು. ಇಂದಿನಿಂದಲೇ ಜಿಲ್ಲೆಯಾದ್ಯಂತ ರ‍್ಯಾಲಿ, ಸಮಾವೇಶಗಳನ್ನು ನಡೆಸುತ್ತೇವೆ. ಕಳೆದ ಐವತ್ತು ವರ್ಷಗಳಿಂದ ಕಾಂಗ್ರೆಸ್ಸಿಗರು ಮಾಡಿರುವ ಭ್ರಷ್ಟಾಚಾರದ ವಿವರವನ್ನು ಬಯಲಿಗಿಡುತ್ತೇವೆ. ಅವರ ಹೋರಾಟಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದರು. ಬಳ್ಳಾರಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜಿಲ್ಲೆ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಜಿಲ್ಲೆ. ವಿಜಯನಗರ ಸಾಮ್ರಾಜ್ಯದ ಮೂಲ ನೆಲ. ಇಂತಹ ನೆಲದಲ್ಲಿ ಹುಟ್ಟಿರುವ ನಾವು ಹೋರಾಟಕ್ಕೆ ಅಂಜುವವರಲ್ಲ. ಗುಂಡಿಗೆ ಅಂಜಿ ಬೆನ್ನು ಕೊಟ್ಟು ಓಡುವವರಲ್ಲ. ಈ ಕಾಂಗ್ರೆಸ್ಸಿಗರು ಬರಲಿ. ಬೇಕಾದ ಸಮಾವೇಶ ಮಾಡಲಿ. ನಾವೇನು ಉತ್ತರ ಕೊಡಬೇಕೋ ಕೊಡುತ್ತೇವೆ ಎಂದರು. ಇವರು ನಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಬರುತ್ತಾರಂತೆ.ಆದರೆ ನೆನಪಿಡಲಿ, ನಮ್ಮನ್ನು ಈ ಜಾಗದಲ್ಲಿ ಕೂರಿಸಿರುವುದು ಸಿದ್ಧರಾಮಯ್ಯ ಅವರಲ್ಲ. ನಮ್ಮ ಜಿಲ್ಲೆಯ ಜನ. ಅವರು ಬಯಸಿದರಷ್ಟೇ ನಾವು ಅಧಿಕಾರದಿಂದ ಕೆಳಗಿಳಿಯುತ್ತೇವೆ ಎಂದು ಹೇಳಿದರು. ಇವರ ಪಕ್ಷದ ಸೋನಿಯಾಗಾಂಧಿ ಬಳ್ಳಾರಿಯಿಂದ ಗೆದ್ದು ಹೋದವರು ತಿರುಗಿ ನೋಡಲಿಲ್ಲ. ಆದರೆ ನಾವು ಈ ಜನರ ಮಧ್ಯೆಯೇ ಬೆಳೆದು ಅವರ ನೋವು ನಲಿವುಗಳಲ್ಲಿ ಭಾಗಿಗಳಾಗಿ ಈ ಮಟ್ಟಕ್ಕೆ ಬೆಳೆದು ನಿಂತಿದ್ದೇವೆ. ಕಾಂಗ್ರೆಸ್‌ನವರು ಯಾವತ್ತು ಜನರ ಕಷ್ಟ ಕೇಳಿದ್ದಾರೆ ಎಂದು ಪ್ರಶ್ನಿಸಿದರು. ಇವರು ನನ್ನನ್ನು, ಜನಾರ್ಧನರೆಡ್ಡಿಯನ್ನು ವಿಲನ್ ಮಾಡಬೇಕೆಂದು ಹೊರಟಿದ್ದಾರೆ. ಆದರೆ ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ. ಇವರ ಯಾತ್ರೆಗೆ ತಕ್ಕ ಉತ್ತರ ನೀಡುತ್ತೇವೆ ಎಂದು ನುಡಿದರು. ಹೋರಾಟದ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರ ಗಮನಕ್ಕೆ ತರುವುದಾಗಿ ಇದೇ ಸಂಧರ್ಭದಲ್ಲಿ ಅವರು ಸುದ್ಧಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸುದ್ಧಿಗೋಷ್ಟಿಯಲ್ಲಿ ಕಂದಾಯ ಸಚಿವ ಕರುಣಾಕರ ರೆಡ್ಡಿ,ಪ್ರವಾಸೋದ್ಯಮ ಸಚಿವ ಜನಾರ್ಧನರೆಡ್ಡಿ,ಕೆ‌ಎಂಎಫ್ ಅಧ್ಯಕ್ಷ ಸೋಮಶೇಖರರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.