SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ಬೆಂಗಳೂರು: ಕಾಂಗ್ರೇಸ್ ವಿರುದ್ದ ಗುಡುಗಿದ ಸಿ.ಎಂ:ಜನರ ಮುಂದೆ ಹೋಗಿ ಬಣ್ಣ ಬಯಲು ಮಾಡುತ್ತೇನೆ ಬೆಂಗಳೂರು: ಕಾಂಗ್ರೇಸ್ ವಿರುದ್ದ ಗುಡುಗಿದ ಸಿ.ಎಂ:ಜನರ ಮುಂದೆ ಹೋಗಿ ಬಣ್ಣ ಬಯಲು ಮಾಡುತ್ತೇನೆ ================================================================================ yammar manvi on 28 July, 2010 06:38:00 ಬೆಂಗಳೂರು,ಜುಲೈ,೨೮-ಅಕ್ರಮ ಗಣಿಗಾರಿಕೆ ನಡೆಸುವವರಿಂದ ಕಪ್ಪ ಪಡೆದು ಪಕ್ಷ ಕಟ್ಟಲು ಹೊರಟಿರುವ ಕಾಂಗ್ರೆಸ್ಸಿಗರನ್ನು ಸುಮ್ಮನೆ ಬಿಡುವುದಿಲ್ಲ. ಜನರ ಮುಂದೆ ಹೋಗಿ ಇವರ ಬಣ್ಣ ಬಯಲು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಗುಡುಗಿದ್ದಾರೆ. ವಿಧಾನಸೌಧದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ಶಿಗಾರರ ಜತೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟುವ ಸಲುವಾಗಿ ನಾನು ಕಬ್ಬಿಣದ ಅದಿರಿನ ರಫ್ತನ್ನೇ ನಿಷೇಧಿಸಲು ಹೊರಟಿದ್ದೇನೆ. ಆದರೆ ಕಾಂಗ್ರೆಸ್ಸಿಗರು ಇದನ್ನು ವಿರೋಧಿಸುತ್ತಿದ್ದಾರೆ. ಈ ಅಂಶವೇ ಇವರ ಬಂಡವಾಳವನ್ನು ಬಯಲು ಮಾಡಿದೆ ಎಂದು ಟೀಕಿಸಿದರು. ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರೇ ಕಾಂಗ್ರೆಸ್ ನಾಯಕರು. ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡುತ್ತಿರುವವರೂ ಇವರೇ. ಈಗ ಪಾದಯಾತ್ರೆ ಮಾಡುತ್ತಿರುವವರೂ ಇವರೇ. ಇವರನ್ನು ಸುಮ್ಮನೆ ಬಿಡುವುದಿಲ್ಲ. ಪಾದಯಾತ್ರೆ ಮಾಡಿ ಜನರಿಂದ ಛೀಮಾರಿ ಹಾಕಿಸಿಕೊಂಡು ಬರಲಿ. ನಂತರ ನಾನೂ ತಕ್ಕ ಪಾಠ ಕಲಿಸುತ್ತೇನೆ ಎಂದು ಹೇಳಿದರು. ಅಕ್ರಮ ಗಣಿಗಾರಿಕೆ ಹಣದಿಂದ ಪಕ್ಷ ಕಟ್ಟಲು ಹೊರಟಿದ್ದಾರೆ. ಆದರೆ ನಾನು ಹೇಗೆ ಇಪ್ಪತ್ತು ಇಪ್ಪತ್ತೈದು ವರ್ಷ ಪಾದಯಾತ್ರೆ ಮಾಡಿದೆನೋ? ಇವರೂ ಇಪ್ಪತ್ತೈದು ವರ್ಷ ಪಾದಯಾತ್ರೆ ಮಾಡಿ ಈ ಜಾಗಕ್ಕೆ ಬರಲಿ. ಅಲ್ಲಿಯವರೆಗೂ ಅರಾಮವಾಗಿ ಕುಣಿದಾಡಿಕೊಂಡು, ಹಕ್ಕಿಗಳಂತೆ ಯಾತ್ರೆ ಮಾಡಲಿ ಎಂದು ವ್ಯಂಗ್ಯವಾಡಿದರು. ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವ ಸಲುವಾಗಿ ಗಣಿಗಾರಿಕೆ ರಫ್ತನ್ನೇ ನಿಷೇಧಿಸಿ ಒಂದೆರಡು ದಿನಗಳಲ್ಲಿ ಸರ್ಕಾರ ಆದೇಶ ಹೊರಡಿಸಲಿದೆ. ಅದಿರು ರಫ್ತು ಮಾಡಲು ಅವಕಾಶವಾಗದಂತೆ ಪರ್ಮಿಟ್ಟನ್ನೇ ರದ್ದು ಮಾಡಲಿದೆ. ಕಾಂಗ್ರೆಸ್ಸಿಗರಿಗೆ ನಿಜಕ್ಕೂ ಈ ವಿಷಯದಲ್ಲಿ ಕಾಳಜಿಯಿದ್ದರೆ ಇದನ್ನು ಅವರು ಬೆಂಬಲಿಸಲಿ. ನಮ್ಮ ರಾಜ್ಯದ ಅದಿರು ಸಂಪತ್ತು ರಫ್ತಾಗದೇ ಇದ್ದರೆ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ.ಹೊರದೇಶಗಳಿಗೆ ರಫ್ತಾಗಿ ಅಲ್ಲಿ ತಯಾರಾಗುವ ಉಕ್ಕನ್ನು ದುಬಾರಿ ಬೆಲೆಗೆ ಖರೀದಿಸುವ ಬದಲು ನಮ್ಮಲ್ಲೇ ಟನ್ನಿಗೆ ಹತ್ತರಿಂದ ಹದಿನೈದು ಸಾವಿರ ರೂ ಕಡಿಮೆ ದರದಲ್ಲಿ ಉಕ್ಕು ಖರೀದಿ ಮಾಡಲು ಸಾಧ್ಯವಾಗುತ್ತದೆ. ಮೌಲ್ಯವರ್ಧಿತ ತೆರಿಗೆ ಬರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹಣ ಬರುತ್ತದೆ.ಇಲ್ಲೇ ಉಕ್ಕು ತಯಾರಿಸುವ ಕಾರ್ಖಾನೆಗಳು ಬಂದರೆ ಲಕ್ಷಾಂತರ ಜನರಿಗೆ ಉದ್ಯೋಗ ಸಿಗುತ್ತದೆ. ಇದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು. ಕಬ್ಬಿಣದ ಅದಿರನ್ನು ರಫ್ತು ಮಾಡುವುದನ್ನು ನಿಷೇಧಿಸದಂತೆ ಒತ್ತಾಯಿಸಿ ಇವರು ನ್ಯಾಯಾಲಯಕ್ಕೆ ಹೋಗುತ್ತಾರಂತೆ. ಹೋಗಲಿ. ಇವರನ್ನು ತಡೆದವರ‍್ಯಾರು? ಇವರ ನಡವಳಿಕೆಯನ್ನು ನೋಡಿದರೆ ಗೊತ್ತಾಗುವುದಿಲ್ಲವೇ? ಇವರಿಗೆ ಅಕ್ರಮ ಗಣಿಗಾರಿಕೆ ನಡೆಯಬೇಕು. ಸಿಬಿ‌ಐನ್ನು ಬಳಸಿಕೊಂಡು ಇಂತಹ ಗಣಕೋರರನ್ನು ರಕ್ಷಿಸಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು. ಇಂತವರು ಪಾದಯಾತ್ರೆ ನಡೆಸುತ್ತಿದ್ದಾರೆ. ಇವರು ಪಾದಯಾತ್ರೆ ಮುಗಿಸಲಿ. ಇವರು ಅಧಿಕಾರದಲ್ಲಿದ್ದಾಗ ಮಾಡಿದ್ದೇನು? ಜನರಿಗೆ ಯಾವ್ಯಾವ ರೀತಿ ವಂಚನೆ ಮಾಡಿದರು? ಈಗೇನು ಮಾಡುತ್ತಿದ್ದಾರೆ ಎಂಬುದರ ಸಂಪೂರ್ಣ ವಿವರವನ್ನು ಜನರಿಗೆ ಕೊಡಲು ಪ್ರತಿಯಾತ್ರೆ ಮಾಡುತ್ತೇನೆ ಎಂದು ಯಡಿಯೂರಪ್ಪ ಅಬ್ಬರಿಸಿದರು. ಆಕ್ರಮ ಗಣಿಗಾರಿಕೆಯನ್ನು ತಡೆಗಟ್ಟಲು ಕಾಂಗ್ರೆಸ್ ನಾಯಕರು ಸಲಹೆ ನೀಡಬೇಕಿತ್ತು. ಆದರೆ ಅವರಿಗೆ ಇದು ನಿಲ್ಲುವುದೇ ಬೇಕಿಲ್ಲವಲ್ಲ? ಎಂದು ವ್ಯಂಗ್ಯವಾಡಿದ ಅವರು, ಅದಿರು ರಪ್ತು ನಿಷೇಧ ಅಸಾಧ್ಯ ಎಂಬ ಕೇಂದ್ರ ಸರ್ಕಾರದ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು. ಆಕ್ರಮ ಗಣಿಗಾರಿಕೆಯನ್ನು ತಡೆಗಟ್ಟಲು ಏನು ಮಾಡಬೇಕು? ಅಂತ ನಾನು ಪ್ರಧಾನಿ ಮನ್‌ಮೋಹನ್‌ಸಿಂಗ್ ಅವರಿಗೇ ಹೇಳಿ ಬಂದಿದ್ದೇನೆ. ಬೇರೆ ಯಾವ ರಾಜ್ಯಗಳಲ್ಲಿ ನಿಷೇಧ ಮಾಡುತ್ತೀರೋ? ಇಲ್ಲವೋ? ಆದರೆ ನಮ್ಮ ರಾಜ್ಯದಲ್ಲಿ ಅದಿರು ರಫ್ತು ನಿಷೇಧ ಮಾಡಿ ಎಂದು ಹೇಳಿ ಬಂದಿದ್ದೇನೆ. ಅವರು ಈ ಕುರಿತು ಸಂಸತ್ತಿನಲ್ಲಿ ಚರ್ಚೆ ಮಾಡಲಿ.ದೇಶದ ಸಂಪತ್ತು ದೇಶದಲ್ಲಿ ಉಳಿಯುವಂತೆ ಮಾಡಲಿ. ಈ ಹಿಂದೆ ಗೋವಾ ರಾಜ್ಯದವರು ಮುನ್ನೂರು ನಾಲ್ಕು ನೂರು ರೂಪಾಯಿಗಳಂತೆ ಅದಿರು ಮಾರಿದ ಪರಿಣಾಮವಾಗಿ ಅಲ್ಲಿ ಅದಿರು ಸಂಪತ್ತು ನಾಶವಾಗಿದೆ. ಇಲ್ಲಿ ಅಂತಹ ಪರಿಸ್ಥಿತಿ ಬರಬಾರದು. ನಮ್ಮ ಮುಂದಿನ ಪೀಳಿಗೆಗೆ ಈ ಸಂಪತ್ತು ಉಳಿಯಬೇಕು ಎಂದು ಹೇಳಿದರು. ಇವತ್ತು ಕಾಂಗ್ರೆಸ್‌ನವರು ಆಕ್ರಮ ಗಣಿಗಾರಿಕೆ ನಡೆಯದಂತೆ ನೋಡಿಕೊಳ್ಳಲು ಸಿಬಿ‌ಐ ತನಿಖೆ ನಡೆಯಬೇಕು ಎಂದು ಹೇಳಿದರೆ ಅದನ್ನು ಕೇಳಲು ನಾವು ತಯಾರಿಲ್ಲ. ಅವರ ತಾಳಕ್ಕೆ ತಕ್ಕಂತೆ ಸರ್ಕಾರ ನಡೆಸಲು ಸಾಧ್ಯವಿಲ್ಲ. ಅಥವಾ ಅವರೇನೂ ಸರ್ವಾಧಿಕಾರಿಗಳೂ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹೀಗಾಗಿಯೇ ಅವರು ಸಿಬಿ‌ಐ ಮಂತ್ರ ಉಚ್ಚರಿಸಿದರೆ ನಾವು ಲೋಕಾಯುಕ್ತ ಎಂಬ ತಿರುಮಂತ್ರವನ್ನು ಉಚ್ಚರಿಸುತ್ತಿದ್ದೇವೆ. ನಡೆಯಲಿ.ಲೋಕಾಯುಕ್ತ ತನಿಖೆ ನಡೆಯಲಿ. ಲೋಕಾಯುಕ್ತರು ಅರಣ್ಯ, ಕಂದಾಯ, ಗಣಿ ಇಲಾಖೆಯ ಅಧಿಕಾರಿಗಳ ಸಹಕಾರ ಬೇಕು ಎಂದಿದ್ದಾರೆ.ಅವರು ಯಾವ ಅಧಿಕಾರಿಗಳನ್ನು ಕೇಳುತ್ತಾರೋ? ಅವರ ಸೇವೆಯನ್ನು ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಯಡಿಯೂರಪ್ಪ ಭರವಸೆ ನೀಡಿದರು. ಜನಾದೇಶ ಪಡೆಯಲು ಬರುವಂತೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ನೀಡಿರುವ ಪಂಥಾಹ್ವಾನಕ್ಕೆ ಉತ್ತರಿಸಿದ ಅವರು, ಮೂರು ವರ್ಷಗಳ ನಂತರ ಜನಾದೇಶ ಪಡೆಯಲು ಬರಲೇಬೇಕಲ್ಲ? ಅಲ್ಲಿಯವರೆಗೂ ಕಾಂಗ್ರೆಸ್‌ನವರು ಪಾದಯಾತ್ರೆ ಮಾಡಿಕೊಂಡು ಇರಲಿ ಎಂದು ಚುಚ್ಚಿದರು.