Home | ದ.ಕ.ಜಿಲ್ಲಾ ವಾರ್ತೆ | ಉಡುಪಿ | ರಾಜ್ಯದ ಅಭಿವೃದ್ಧಿ 10 ವರ್ಷ ಹಿಂದಕ್ಕೆ: ಸಿದ್ದರಾಮಯ್ಯ ಟೀಕೆ

ರಾಜ್ಯದ ಅಭಿವೃದ್ಧಿ 10 ವರ್ಷ ಹಿಂದಕ್ಕೆ: ಸಿದ್ದರಾಮಯ್ಯ ಟೀಕೆ

Font size: Decrease font Enlarge font

ಉಡುಪಿ: ರಾಜ್ಯದ ಹಣಕಾಸು ವ್ಯವಸ್ಥೆ ಶೋಚನೀಯವಾಗಿದೆ. ಯಾವುದೇ ಯೋಜನೆಗಳು ಸರ್ಮಪಕವಾಗಿಲ್ಲ. ಬಿಜೆಪಿ ಅಧಿಕಾರದಲ್ಲಿ ರಾಜ್ಯದ ಅಭಿವೃದ್ಧಿ 10 ವರ್ಷ ಹಿಂದಕ್ಕೆ ಹೋಗಿದೆ ಎಂದು ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
 

ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾದ ಪಕ್ಷದ ಕಾರ್ಯಕರ್ತರ, ಪದಾಧಿಕಾರಿಗಳ ಹಾಗೂ ಜನಪ್ರತಿನಿಧಿ ಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
 

ವಿವಿಧ ಮೂಲಗಳಿಂದ ರಾಜ್ಯದ ಖಜಾನೆಗೆ ಬರ ಬೇಕಾದ 20 ಸಾವಿರ ಕೋಟಿ ರೂ. ಹಣವನ್ನು ಬಿಜೆಪಿ ಯವರು ಲೂಟಿ ಮಾಡಿದ್ದಾರೆಂದು ಆರೋಪಿಸಿದ ಅವರು, ಸಂವಿಧಾನದ ಮೇಲೆ ಗೌರವವಿಲ್ಲದ ಇವರು ರಾಷ್ಟ್ರಪತಿ, ರಾಜ್ಯಪಾಲರಿಗೆ ಏಕವಚನದಲ್ಲಿ ಬೈಯತ್ತಾರೆ. ಈ ಹಿಂದಿನ ಉಪಚುನಾವಣೆಗಳನ್ನು ಬಿಜೆಪಿ ಹಣ, ತೋಳ್ಬಲ, ಜಾತಿಯಿಂದಾಗಿ ಗೆದ್ದಿದೆಯೇ ಹೊರತು ಜನರ ವಿಶ್ವಾಸದಿಂದಲ್ಲ ಎಂದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶ ನಿಶ್ಚಳವಾಗಿದೆ. ಆದುದರಿಂದ ಈ ಚುನಾವಣೆ ಯಲ್ಲಿ ಶೇ.100 ಗೆದ್ದೇ ತೀರಬೇಕು. 2012ನೆ ಇಸವಿ ಚುನಾವಣೆಗಳ ವರ್ಷ ಆಗಲಿದೆ. ರಾಜ್ಯ ವಿಧಾನಸಭಾ ಚುನಾವಣೆ ಕೂಡ ಅಕ್ಟೋಬರ್- ನವೆಂಬರ್ ನಲ್ಲಿ ನಡೆದೇ ನಡೆಯುತ್ತದೆ ಎಂದು ಅವರು ಭವಿಷ್ಯ ನುಡಿದರು.

ಸಿಟ್ಟಿಂಗ್ ಮುಖ್ಯಮಂತ್ರಿಯೊಬ್ಬರು ಜೈಲು ಪಾಲಾ ಗಿರುವ ನಿದರ್ಶನ ರಾಜ್ಯದ ರಾಜಕೀಯ ಇತಿಹಾಸದಲ್ಲಿ ನಡೆದೇ ಇಲ್ಲ. ಆ ಕುಖ್ಯಾತಿಗೆ ಈಗ ಬಿ.ಎಸ್. ಯಡಿಯೂರಪ್ಪ ಭಾಜನರಾಗಿದ್ದಾರೆ. ಇದೀಗ ಜೈಲಿನಿಂದ ಹೊರ ಬಂದಿರುವ ಯಡಿಯೂರಪ್ಪ ಮತ್ತೆ ಜೈಲಿಗೆ ಹೋಗುವುದು ಗ್ಯಾರಂಟಿ. ಅವರ ಮೇಲಿನ ಆರೋಪಗಳ ಬಗ್ಗೆ ಸಾಕಷ್ಟು ಸಾಕ್ಷಗಳಿವೆ. ಅವರಿಗೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಸಿದ್ದರಾಮ್ಯ ಹೇಳಿದರು.

ಕೇಂದ್ರ ಸರಕಾರ ವಿದ್ಯುತ್ ಹಂಚಿಕೆಯಲ್ಲಿ ತಾರತಮ್ಯ ಮಾಡುತಿದೆ ಎಂದು ಶೋಭಾ ಕರಂದ್ಲಾಜೆ ಸುಳ್ಳು ಹೇಳುತ್ತಿದ್ದಾರೆ. ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೂ ನೀಡುವಂತೆಯೇ ವಿದ್ಯುತ್ತನ್ನು ಕರ್ನಾಟಕಕ್ಕೂ ನೀಡುತ್ತಿದೆ. ಬಿಜೆಪಿ ಸರಕಾರ ಲಂಚಕ್ಕಾಗಿ ಸಾವಿರಾರು ಕೋಟಿ ಖರ್ಚು ಮಾಡಿ ವಿದ್ಯುತ್ತನ್ನು ಖರೀದಿಸುತ್ತಿದೆಯೇ ಹೊರತು, ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳಲ್ಲಿ ಒಂದೇ ಒಂದು ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗಿಲ್ಲ ಎಂದು ಅವರು ಟೀಕಿಸಿದರು.

ಸಮಾರಂಭವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕದ ಉಸ್ತುವಾರಿ ಮಧುಸೂಧನ್ ಮಿಸ್ರಿ ಉದ್ಘಾಟಿಸಿದರು. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಮಾತನಾಡಿದರು.

ಕಾಂಗ್ರೆಸ್ ಮುಖಂಡರಾದ ಆಸ್ಕರ್ ಫೆರ್ನಾಂಡಿಸ್, ವಿನಯಕುಮಾರ್ ಸೊರಕೆ, ಬಿ.ಎಲ್.ಶಂಕರ್, ಜಯಪ್ರಕಾಶ್ ಹೆಗ್ಡೆ, ವಸಂತ ವಿ.ಸಾಲ್ಯಾನ್, ಕೆ.ಪಿ. ನಂಜುಂಡಿ, ಅಭಯಚಂದ್ರ ಜೈನ್, ಗೋಪಾಲ ಭಂಡಾರಿ, ಪ್ರಮೋದ್ ಮಧ್ವರಾಜ್, ನಿಖಿಲ್ ಉಮೇಶ್, ವರೋನಿಕಾ ಕರ್ನೆಲಿಯೊ, ಎಂ.ಎ. ಗಫೂರ್, ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಗೋಪಾಲ ಪೂಜಾರಿ ಸ್ವಾಗತಿಸಿದರು. ಜನಾರ್ದನ ತೋನ್ಸೆ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯದ ಪ್ರಗತಿ ಶೂನ್ಯ: ಜಿ.ಪರಮೇಶ್ವರ್
ಈ ಬಾರಿ 66 ಸಾವಿರ ಕೋಟಿ ರೂ. ಬಜೆಟ್ ಮಂಡಿಸಿದ್ದರೂ ಅದರ ಅರ್ಧ ದಷ್ಟು ಕೂಡ ಹಣ ಖರ್ಚಾಗಿಲ್ಲ. ಕರ್ನಾಟಕ ಈಗ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನ ಪಡೆದಿರುವುದು ಬಿಟ್ಟರೆ ಪ್ರಗತಿಯಲ್ಲಿ ಶೂನ್ಯ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಆರೋಪಿಸಿದ್ದಾರೆ.

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org