ಬೆಳ್ತಂಗಡಿ: ತಲವಾರಿನಿಂದ ಕಡಿದು ಕೊಲೆ

ಬೆಳ್ತಂಗಡಿ, ಜು.28: ನಗರದ ಮೂರು ಮಾರ್ಗದ ಬಳಿಯ ಹೊಟೇಲ್ ಒಂದರಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರನ್ನು ಹಾಡುಹಗಲೇ ದುಷ್ಕರ್ಮಿಗಳ ತಂಡವೊಂದು ತಲವಾರಿನಿಂದ ಕಡಿದು ಕೊಲೆಗೈದ ಘಟನೆ ಇಂದು ಸಂಭವಿಸಿದೆ.ಒಂದೇ ತಾಸಿನಲ್ಲಿ ಸೆರೆ...
ಹಾಡುಹಗಲೇ ಕೊಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಗಳನ್ನು ಒಂದು ತಾಸಿನೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಉಪ್ಪಿನಂಗಡಿಯ ಬಲ್ಯ ಕ್ರಾಸ್ ಬಳಿ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ವಿಸಿಲ್ ವಿಶ್ವನ ವಿರೋಧಿ ತಂಡದಲ್ಲಿ ಗುರುತಿಸಿಕೊಂಡಿದ್ದ ಸುನೀಶ್, ವಿತೇಶ್ ಹಾಗೂ ಪ್ರಕಾಶ್ ಎಂದು ಗುರುತಿಸಲಾಗಿದೆ.
ವಿಶ್ವನಾಥರನ್ನು ಕೊಲೆಗೈದ ತಂಡ ಪರಾರಿಯಾಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸರು ಎಲ್ಲಾ ಪೊಲೀಸ್ ಠಾಣೆ ಗಳಿಗೆ ಮಾಹಿತಿ ರವಾನಿಸಿದ್ದರು. ಏತನ್ಮಧ್ಯೆ ಬೆಳ್ತಂಗಡಿ ಕೊಯ್ಯೆರು ಕ್ರಾಸ್ ಸಮೀಪ ರಿಕ್ಷಾವೊಂದಕ್ಕೆ ಓಮ್ನಿ ಕಾರೊಂದು ಢಿಕ್ಕಿ ಹೊಡೆದು ಪರಾರಿಯಾಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಿಂದ ಆರೋಪಿಗಳು ಉಪ್ಪಿನಂಗಡಿಯತ್ತ ಹೋಗಿದ್ದಾರೆ ಎಂದು ಅನುಮಾನಿಸಿದ ಪೊಲೀಸರು, ಇಳಂತಿಲ ಸಮೀಪ ಹೊಂಚು ಹಾಕಿ ಕುಳಿತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಆರೋಪಿಗಳು ಪೊಲೀಸರನ್ನು ಗಮನಿಸಿ ಕಾರನ್ನು ನಿಲ್ಲಿಸದೆ ತಪ್ಪಿಸಿಕೊಂಡರು. ಅವರನ್ನು ಬೆನ್ನಟ್ಟಿದ ಪೊಲೀಸರು ಬಲ್ಯ ಕ್ರಾಸ್ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಗೀಡಾದವರನ್ನು ಗುರುವಾಯನಕೆರೆ ನಿವಾಸಿ ವಿಸಿಲ್ ವಿಶ್ವ ಯಾನೆ ವಿಶ್ವನಾಥ ಮೂಲ್ಯ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿ ಗಳನ್ನು ಘಟನೆ ನಡೆದ ಒಂದೇ ತಾಸಿನಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ವಿವರ: ಇಂದು ಸಂಜೆ 5 ಗಂಟೆಯ ಸುಮಾರಿಗೆ ಇಲ್ಲಿನ ಗಣೇಶ್ ಎಂಬ ಹೊಟೇಲ್‌ನಲ್ಲಿ ವಿಶ್ವನಾಥ ತನ್ನ ಗೆಳೆಯ ಸ್ಟಾನಿ ಜಯಕರ್ ಎಂಬವ ರೊಂದಿಗೆ ಟೀ ಕುಡಿಯುತ್ತಾ ಕುಳಿತಿ ದ್ದರು. ಆ ವೇಳೆ ನೀಲಿ ಓಮ್ನಿ ಕಾರಿನಲ್ಲಿ ಬಂದ ತಂಡ ತಲೆಗೆ ಹೆಲ್ಮೆಟ್ ಧರಿಸಿ ಕೊಂಡು ಹೊಟೇಲ್‌ಗೆ ನುಗ್ಗಿ ವಿಶ್ವರಿಗೆ ಪಿಸ್ತೂಲು ತೋರಿಸಿದ್ದಾರೆ. ಈ ವೇಳೆ ಹಿಂದಿನಿಂದ ಓರ್ವ ತಲವಾರಿನಿಂದ ವಿಶ್ವನಾಥರನ್ನು ಕಡಿದಿದ್ದಾರೆ. ಚೂರಿಯಿಂದಲೂ ಇರಿದಿದ್ದಾರೆ. ಗಂಭೀರ ಗಾಯಗೊಂಡ ವಿಶ್ವ ಅಲ್ಲಿಯೇ ಕುಸಿದು ಬಿದ್ದಾಗ ದುಷ್ಕರ್ಮಿಗಳು ಕಾರಿನಲ್ಲಿ ಉಜಿರೆಯತ್ತ ಪರಾರಿಯಾದರು ಎಂದು ಹೊಟೇಲ್ ಮಾಲಕ ದಿವಾಕರ ಎಂಬವರು ತಿಳಿಸಿದ್ದಾರೆ.
ಗಂಭೀರ ಗಾಯಗೊಂಡ ವಿಶ್ವನಾಥರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಅವರು ಆ ವೇಳೆಗೆ ಮೃತಪಟ್ಟಿದ್ದರು.
ಕೊಲೆಗೀಡಾದ ವಿಶ್ವನಾಥ ಗುರುವಾಯನಕೆರೆಯ ಧನ್ಯಕುಮಾರ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಬಂಧಿತರಾಗಿದ್ದರು. ಬಳಿಕ ಜಾಮೀನಿನಲ್ಲಿ ಬಿಡುಗಡೆ ಗೊಂಡಿದ್ದರು. ಇದಲ್ಲದೆ ಹಲ್ಲೆ, ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳಿಗೆ ಸಂಬಂಧಿಸಿ ವಿಶ್ವನಾಥರ ವಿರುದ್ಧ ಪೊಲೀಸ್ ಮೊಕದ್ದಮೆಗಳು ದಾಖಲಾ ಗಿವೆ. ಈತನ ಹೆಸರು ಬೆಳ್ತಂಗಡಿ ಪೊಲೀಸ್ ಠಾಣೆಯ ಕಾಲಪಟ್ಟಿಯಲ್ಲಿ ಇದೆ ಎಂದು ತಿಳಿದು ಬಂದಿದೆ.
ಕೆಲವು ತಿಂಗಳ ಹಿಂದೆಯೇ ವಿಶ್ವನಾಥರ ಮೇಲೆ ತಂಡವೊಂದು ದಾಳಿ ನಡೆಸಿತ್ತು. ಆದರೆ ಅದೃಷ್ಟವಶಾತ್ ಬಚಾವಾಗಿದ್ದರು.
ಕೊಲೆ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪುತ್ತೂರು ಎಎಸ್ಪಿ ಅಮಿತ್ ಸಿಂಗ್, ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸುದರ್ಶನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Rate this article



del.icio.us
Digg
Comments (0 posted):
Post your comment