ಬಂಟ್ವಾಳ: ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇ ಅಧಿಕಾರಿ
ದೂರು ಕೊಡಿ-ಲಂಚ ಸ್ವೀಕರಿಸುವ ಅಧಿಕಾರಿಗಳನ್ನು ನಾವು ಹಿಡಿಯುತ್ತೇವೆ -ಲೋಕಾಯುಕ್ತ ಅಧಿಕಾರಿಗಳ ಭರವಸೆ
ಬಂಟ್ವಾಳ, ಜ ೩೧: ಸೋಮವಾರ ಬಿ.ಸಿ.ರೋಡಿನ ಭೂಮಾಪನಾ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಸರ್ವೇಯರ್ ಓರ್ವನನ್ನು ಪತ್ತೆ ಹಚ್ಚಿರುವ ಲೋಕಾಯುಕ್ತ ಅಧಿಕಾರಿಗಳು, ತಾಲೂಕು ಕಚೇರಿಯ ಕಡೆಗೂ ಗಮನ ಹರಿಸಬೇಕಾಗಿದೆ. ಹೀಗೊಂದು ಬಲವಾದ ಒತ್ತಾಯ ಕೇಳಿಬಂದಿದ್ದು,ತಾಲೂಕು ಕಛೇರಿಯ ಅವ್ಯವಸ್ಥೆ ಕುರಿತಾಗಿ ದಾಳಿ ವೇಳೆ ಸಾರ್ವಜನಿಕರು ಲೋಕಾಯುಕ್ತದ ಅಧಿಕಾರಿಗಳಿಗೆ ಈ ಬಗ್ಗೆ ಮೌಖಿಕದೂರು ನೀಡಿದ್ದು, ಸಮಸ್ಯೆ ಪರಿಶೀಲಿಸಿ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.
ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ತಾಲೂಕಿನ ಹಲವು ಸರ್ಕಾರಿ ನೌಕರರು ಲಂಚ ಸ್ವೀಕಾರದ ಆರೋಪದಲ್ಲಿ ಸಿಕ್ಕಿ ಬಿದ್ದಿದ್ದಾರೆ. ತಾಲೂಕಿನಲ್ಲಿ ಈಗಾಗಲೇ ತಾಲೂಕಿನಲ್ಲ್ಲಿ ರೇಷ್ಮೆ ಇಲಾಖೆಯ ಅಧಿಕಾರಿ,ವರ್ಷಗಳ ಹಿಂದೆ ಪ್ರಭಾರ ತಹಶಿಲ್ದಾರ್ ಆಗಿದ್ದ ಶ್ರೀಧರ ಸುಬ್ರಾಯ ಆಚಾರ್, ಉಪತಹಶೀಲ್ದಾರ್,ಕೆಲ ತಿಂಗಳ ಹಿಂದೆಯಷ್ಟೇ ನಾವೂರು ಗ್ರಾಮಕರಣಿಕ, ಗ್ರಾಮ ಸಹಾಯಕ, ಇದೀಗ ಭೂಮಾಪನಾಧಿಕಾರಿ... ಹೀಗೆ ಲೋಕಾಯುಕ್ತದ ಬಲೆಗೆ ಬಿದ್ದವರ ಪಟ್ಟಿ ಏರುತ್ತಾ ಹೋಗುತ್ತದೆ.
ಎಲ್ಲಾ ಇಲಾಖೆಗಳ ಪೈಕಿ ಹೆಚ್ಚಿನ ಭ್ರಷ್ಟಾಚಾರ ನಡೆಯುತ್ತಿರುವುದು ಕಂದಾಯ ಇಲಾಖೆಯಲ್ಲಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಸೋಮವಾರ ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳ ಗಮನ ಸೆಳೆದಿರುವ ಸಾರ್ವಜನಿಕರು ಇಲ್ಲಿ ಬಡಗ್ರಾಮಸ್ಥರನ್ನು ಅಧಿಕಾರಿಗಳು ಸತಾಯಿಸುತ್ತಿರುವ ಬಗ್ಗೆ ದೂರಿಕೊಂಡಿದ್ದಾರೆ.
ತಾಲೂಕು ಕಚೇರಿಯಲ್ಲಿ ಜಮೀನಿಗೆ ಸಂಬಂಧಿಸಿದ ಕಡತಗಳು ಕಾಣೆ, ವಿಲೇವಾರಿಯಾಗದೆ ಬಾಕಿ ಉಳಿದಿರುವುದು, ವೃಥಾ ಕಾರಣ ಸತಾಯಿಸುವುದು,ಮಧ್ಯವರ್ತಿಗಳ ಹಾವಳಿ, ಚಿಕ್ಕ ಪುಟ್ಟ ಕಾರ್ಯಗಳಿಗೆ ಹಣದ ಬೇಡಿಕೆ ಮೊದಲಾದವುಗಳ ಬಗ್ಗೆ ಈಗಾಗಲೇ ಸಾರ್ವಜನಿಕರ ಆರೋಪ ಕೇಳಿ ಬಂದಿದೆ. ನಿನ್ನೆ ದಾಳಿ ನಡೆದ ಭೂಮಾಪನಾ ಕಛೇರಿಯಲ್ಲೂ ಜಮೀನು ನಕ್ಷೆ ಸಿದ್ದಪಡಿಸಲು ತಿಂಗಳು ಗಟ್ಟಲೆ ಕಾಯಿಸಲಾಗುತ್ತಿದ್ದು, ಕಂದಾಯ ಇಲಾಖೆಯ ಜಡ್ಡು ಹಿಡಿದ ಕಾರ್ಯವೈಖರಿಯ ಬಗ್ಗೆ ತಾಲೂಕು ಪಂಚಾಯತ್ ಹಾಗೂ ಕೆಡಿಪಿಯ ಪ್ರತೀ ಸಭೆಗಳಲ್ಲೂ ಸದಸ್ಯರು ಏರುದನಿಯಲ್ಲಿ ಮಾತನಾಡುತ್ತಿದ್ದರೂ, ಇಲಾಖೆಯಿಂದ ಸೂಕ್ತ ಸ್ಪಂದನೆ ದೊರೆತಿಲ್ಲ.
ತಾಲೂಕು ಕಛೇರಿಯ ಅವ್ಯವಸ್ಥೆ ಕುರಿತಾಗಿ ರಾಜಕೀಯ ಪಕ್ಷಗಳೂ ಬೀದಿಗಿಳಿದು ಹೋರಾಟ ನಡೆಸಿದೆ, ಕೆಲ ದಿನಗಳ ಹಿಂದೆಯಷ್ಟೇ ಅಮ್ಟಾಡಿ ಗ್ರಾಮದ ಹಕ್ಕುಪತ್ರ ನೀಡಿಕೆಯ ವಿಳಂಬವನ್ನು ಖಂಡಿಸಿ ಶಾಸಕ ರಮಾನಾಥ ರೈ ನೇತೃತ್ವದಲ್ಲಿ ಪ್ರತಿಭಟನೆಯೂ ನಡೆದಿತ್ತು.
ಸೋಮವಾರ ಸಾರ್ವಜನಿಕರ ದೂರಿಗೆ ಸ್ಪಂದಿಸಿದ ಲೋಕಾಯುಕ್ತದ ಅಧಿಕಾರಿಗಳು, ದೂರು ಕೊಡಿ-ಲಂಚ ಸ್ವೀಕರಿಸುವ ಅಧಿಕಾರಿಗಳನ್ನು ನಾವು ಹಿಡಿಯುತ್ತೇವೆ ಎಂದು ಭರವಸೆ ನೀಡಿದ್ದಾರೆ. ಕಂದಾಯ ಇಲಾಖೆ ಸೇರಿದಂತೆ ಕೆಲವೊಂದು ನಿರ್ದಿಷ್ಟ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಜನಸಾಮಾನ್ಯರಿಂದ ಹಿಡಿದು-ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಗೊತ್ತೇ ಇದೆ. ಆದರೆ ದೂರು ಕೊಟ್ಟರೆ ಮಾತ್ರ ದಾಳಿ ನಡೆಸುತ್ತೇವೆ ಎನ್ನುವುದು ಎಷ್ಟು ಸರಿ..? ಎಂಬುವುದು ಇದೀಗ ಚರ್ಚೆಯ ವಿಷಯವಾಗಿದೆ.



del.icio.us
Digg
Comments (0 posted):
Post your comment