ಕಾರವಾರ: ಕೈಗಾ ಸುತ್ತಲೂ ಶೀಘ್ರವೇ ಆರೋಗ್ಯ ಸಮೀಕ್ಷೆ : ಆಶೀಸರ ಹೆಗಡೆ
ಬಹುದಿನಗಳಿಂದ ಬೇಡಿಕೆಯಲ್ಲಿದ್ದ ಸಾರ್ವಜನಿಕ ಸುರಕ್ಷಾ ಸಮಿತಿ ರಚನೆ
ಕಾರವಾರ, ಜ ೪: ಕೈಗಾ ಅಣುಸ್ಥಾವರದ ಸುತ್ತಲಿನ ೧೬ ಕಿ.ಮೀ. ವ್ಯಾಪ್ತಿಯೊಳಗಿನ ಎಲ್ಲ ಗ್ರಾಮಗಳ ಆರೋಗ್ಯ ಸಮೀಕ್ಷೆಯನ್ನು ನಡೆಸಲು ಕ್ರಮ ಕೈಗೊಳ್ಳಲಾಗಿದೆಯೆಂದು ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷರಾದ ಅನಂತ ಹೆಗಡೆ ಆಶೀಸರ ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಭವನದಲ್ಲಿಂದು ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಕೈಗಾ ಅಣುಸ್ಥಾವರದ ಹಿರಿಯ ಅಧಿಕಾರಿಗಳು ಹಾಗೂ ಆರೋಗ್ಯ ಅಧಿಕಾರಿಗಳ ಜೊತೆ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು. ಅಣುಸ್ಥಾವರದ ಸುತ್ತಲಿನ ೧೬ ಕಿ.ಮೀ ವ್ಯಾಪ್ತಿಯ ೪೩ ಗ್ರಾಮಗಳ ಆರೋಗ್ಯ ಸಮೀಕ್ಷೆ ಕುರಿತು ಕೈಗಾದ ಹಿರಿಯ ಅಧಿಕಾರಿಗಳು ಒಪ್ಪಿದ್ದು ಶೀಘ್ರವೇ ವಿಜ್ಞಾನಿಗಳು ಹಾಗೂ ವೈದ್ಯಕೀಯ ತಂಡ ಸಮೀಕ್ಷೆ ನಡೆಸಲಿದೆಯೆಂದು ಆಶೀಸರ ಹೆಗಡೆ ತಿಳಿಸಿದ್ದಾರೆ.
ಬಹುದಿನಗಳಿಂದ ಬೇಡಿಕೆಯಲ್ಲಿದ್ದ ಸಾರ್ವಜನಿಕ ಸುರಕ್ಷಾ ಸಮಿತಿಯು ಈಗಾಗಲೇ ರಚನೆಯಾಗಿದ್ದು ಕೇವಲ ಕೈಗಾ ಅಧಿಕಾರಿಗಳು ಮಾತ್ರವಲ್ಲದೇ ಈಗ ಜಂಟಿ ಸಮಿತಿಯಾಗಿ ಕಾರ್ಯನಿರ್ವಹಿಸಲಿದೆ. ಸಮಿತಿಯಲ್ಲಿ ಸರಕಾರಿ ಅಧಿಕಾರಿಗಳು, ಪರಿಸರ ತಜ್ಞರು ಒಳಗೊಂಡಿರುತ್ತಾರೆ. ೩ ತಿಂಗಳಿಗೊಮ್ಮೆ ಈ ಸಮಿತಿಯು ಪರಿಶೀಲನೆ ನಡೆಸಲಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆರೋಗ್ಯ ನಿಧಿಯನ್ನೊಂದು ಸ್ಥಾಪಿಸಲಾಗುವುದು. ಕೈಗಾ ಸುತ್ತಲಿನ ಗ್ರಾಮಸ್ಥರ ತೀವೃತರದ ಅನಾರೋಗ್ಯದ ಖರ್ಚನ್ನು ಈ ನಿಧಿಯಿಂದ ಭರಿಸಲಾಗುವುದು. ಅಣುಸ್ಥಾವರದ ಸುತ್ತಲಿನ ಜೀವವೈವಿಧ್ಯತೆಯ ಪರಿಸ್ಥಿತಿ ಕುರಿತು ದಶಕದ ಹಿಂದೆ ಈಗಾಗಲೇ ಮಂಗಳೂರು ವಿಶ್ವವಿದ್ಯಾಲಯ ಅಧ್ಯಯನ ನಡೆಸಿದ್ದು ತಜ್ಞರ ತಂಡವು ಇನ್ನೊಮ್ಮೆ ಸಮೀಕ್ಷೆ ನಡೆಸಲಿದೆಯೆಂದರು.
ಕೈಗಾ ಸುತ್ತಲಿನ ೫ ಕಿ.ಮೀ ವ್ಯಾಪ್ತಿಯ ಗ್ರಾಮಗಳಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಅವರು ಪತ್ರ ಬರೆಯುವುದಾಗಿ ತಿಳಿಸಿದರು.



del.icio.us
Digg
Comments (0 posted):
Post your comment