Home | ಉ.ಕ.ಜಿಲ್ಲಾ ವಾರ್ತೆ | ಹಳಿಯಾಳ | ಬೆಂಗಳೂರು: ಅಣ್ಣ ಹಜಾರೆಗೆ ರಾಜ್ಯದ್ಯಂತ ವ್ಯಪಾಕ ಬೆಂಬಲ:ಆರನೆ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಗ್ರಹ

ಬೆಂಗಳೂರು: ಅಣ್ಣ ಹಜಾರೆಗೆ ರಾಜ್ಯದ್ಯಂತ ವ್ಯಪಾಕ ಬೆಂಬಲ:ಆರನೆ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಗ್ರಹ

Font size: Decrease font Enlarge font

ಬೆಂಗಳೂರು: ಭ್ರಷ್ಟಾಚಾರದ ನಿರ್ಮೂಲನೆಗಾಗಿ ಪ್ರಬಲ ಜನಲೋಕಪಾಲ್ ಮಸೂದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಅಣ್ಣಾ ಹಜಾರೆ ನಡೆಸಿರುವ ಹೋರಾಟಕ್ಕೆ ರಾಜ್ಯಾದ್ಯಂತ ಸತತ ಆರನೇ ದಿನವೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
 
ಬೆಂಗಳೂರು,ಬೀದರ್,ಧಾರವಾಡ,ಚಾಮರಾಜನಗರ,ಮಡಿಕೇರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿ ಪ್ರತಿಭಟನಾ ಮೆರವಣಿಗೆ,ಸಭೆಗಳು ನಡೆದಿದ್ದು ಗುರಿ ತಲುಪುವವರೆಗೆ ಹೋರಾಟ ನಡೆಸುವ ಘೋಷಣೆಗಳು ಮೊಳಗಿವೆ.
 
ರಾಜಧಾನಿಯ ಫ್ರೀಡಂ ಪಾರ್ಕ್‌ನಲ್ಲಿಂದು ನಡೆದ ಪ್ರತಿಭಟನಾ ಸಭೆಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ,ಕಾಳೀಮಠದ ಶ್ರೀಗಳು ಸೇರಿದಂತೆ ಹಲ ಪ್ರಮುಖರು,ಭ್ರಷ್ಟಾಚಾರವನ್ನು ಬೇರು ಸಮೇತ ತೊಲಗಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಮಾತನಾಡಿ, ದೇಶ ಈ ಹಿಂದೆ ಬ್ರಿಟಿಷರ ದಾಸ್ಯಕ್ಕೊಳಗಾಗಿ ಶತಮಾನಗಳ ಕಾಲ ಸಂಕಷ್ಟ ಅನುಭವಿಸಿತು.ಈಗ ಜನಸಾಮಾನ್ಯರು ಭ್ರಷ್ಟಾಚಾರದ ಹೊಡೆತಕ್ಕೆ ಸಿಲುಕಿ ತತ್ತರಿಸಿದ್ದಾರೆ ಎಂದು ವಿಷಾದಿಸಿದರು.
ವಿಪರ್ಯಾಸವೆಂದರೆ ಭ್ರಷ್ಟಾಚಾರದಲ್ಲಿ ಮುಳುಗಿದವರೂ ಅಣ್ಣಾ ಹಜಾರೆ ಅವರು ನಡೆಸಿದ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳುತ್ತಿದ್ದಾರೆ.ಅವರ ಬೆಂಬಲ ಬೇಕಿಲ್ಲ.ಈ ದೇಶದ ಸ್ವಾತಂತ್ರ್ಯಕ್ಕಾಗಿ ಬೀದಿಗಿಳಿದು ಹೋರಾಡಿದ ಜನರಿಗೆ ಭ್ರಷ್ಟಾಚಾರದ ವಿರುದ್ಧವೂ ಹೋರಾಟ ನಡೆಸುವುದು ಗೊತ್ತಿದೆ ಎಂದರು.
 
ಭ್ರಷ್ಟಾಚಾರ ಬೇರು ಸಮೇತ ತೊಲಗದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ.ಹೀಗಾಗಿ ಎಲ್ಲರೂ ಸೇರಿ ಭ್ರಷ್ಟಾಚಾರ ಎಂಬ ಮರವನ್ನು ಉರುಳಿಸಬೇಕು.ಅಣ್ಣಾ ಹಜಾರೆ ಅವರ ಕೂಗಿಗೆ ಶಕ್ತಿ ನೀಡಬೇಕು ಎಂದು ಕರೆ ನೀಡಿದರು.
ಕಾಳೀ ಮಠದ ಶ್ರೀಗಳು ಮಾತನಾಡಿ,ಭ್ರಷ್ಟಾಚಾರವನ್ನು ತೊಲಗಿಸಲು ಇಚ್ಚಾಶಕ್ತಿ ಬೇಕು.ಇವತ್ತು ವ್ಯವಸ್ಥೆಯ ಆಳದಲ್ಲೇ ಭ್ರಷ್ಟಾಚಾರ ಎಂಬುದು ಬೇರು ಬಿಟ್ಟಿದೆ.ಇದರ ವಿರುದ್ಧ ವ್ಯಾಪಕ ಹೋರಾಟ ನಡೆಯಬೇಕು.ನಿರಂತರ ಹೋರಾಟದಿಂದ ಮಾತ್ರ ಇದು ಸಾಧ್ಯ ಎಂದರು.
ಭ್ರಷ್ಟಾಚಾರಕ್ಕೆ ವಿರುದ್ಧವಾಗಿ ಹೋರಾಡುವಾಗ ಯಾರಿಗೂ ರಿಯಾಯಿತಿ ನೀಡುವ ಅಗತ್ಯವಿಲ್ಲ ಎಂದ ಅವರು,ಮಠಾಧಿಪತಿಗಳನ್ನೂ ಜನಲೋಕಪಾಲ್ ಮಸೂದೆಯ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದರು.
ಇವತ್ತು ದೇಶದ ಭವಿಷ್ಯ ಸುಭದ್ರವಾಗಿರಬೇಕು ಎಂಬ ಕಾರಣಕ್ಕಾಗಿ ಭ್ರಷ್ಟಾಚಾರದ ವಿರುದ್ಧ ವ್ಯಾಪಕ ಹೋರಾಟ ಮಾಡಬೇಕಿದೆ.ಎಲ್ಲರೂ ಸೇರಿ ಅಣ್ಣಾ ಹಜಾರೆ ಅವರಿಗೆ ಶಕ್ತಿ ತುಂಬಬೇಕಿದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಚಿಕ್ಕ ಚಿಕ್ಕ ಮಕ್ಕಳೂ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು,ದೇಶಭಕ್ತಿ ಗೀತೆಗಳನ್ನು ಹಾಡಿದ್ದು ಎಲ್ಲರ ಗಮನ ಸೆಳೆಯುವಂತಿತ್ತು.
 
ಇದೇ ರೀತಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗಾಂಧೀವಾದಿ ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿ ಜನ ಬೀದಿ ಹೋರಾಟ,ಪ್ರತಿಭಟನಾ ಸಭೆಗಳನ್ನು ನಡೆಸಿದರು.
ಮಾಜಿ ಪ್ರಧಾನಿ ದೇವೆಗೌಡ ಬೆಂಬಲ: ಭ್ರಷ್ಟಚಾರವನ್ನು ಹತ್ತಿಕ್ಕಲು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ.
ಈ ಸಂಬಂಧ ಒಂಬತ್ತು ಪ್ರಾದೇಶಿಕ ಪಕ್ಷಗಳ ಜತೆ ಸೇರಿ ೨೩ರಂದು ರಾಷ್ಟ್ರವ್ಯಾಪಿ ಹೋರಾಟ ಕೈಗೊಳ್ಳುವುದಾಗಿ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ಜನ ಲೋಕಪಾಲ ಮಸೂದೆ ಬಗ್ಗೆ ಇನ್ನೂ ಹೆಚ್ಚು ಚರ್ಚಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸರಕಾರ ಅಣ್ಣಾ ಹೋರಾಟವನ್ನು ಗಂಭೀರವಾಗಿ ಪರಿಗಣಿಸಬೇಕು. ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಾಗಿದೆ ಎಂದರು.
 
ಜನಲೋಕಪಾಲ ವಿಧೇಯಕ ಜಾರಿ ಆಗ್ರಹಿಸಿ ಹಜಾರೆ ಪಟತೊಟ್ಟು ನಿಂತಿದ್ದಾರೆ. ಭ್ರಷ್ಟಚಾರ ವಿರುದ್ಧ ಗಾಂಧಿವಾದಿ ಹಜಾರೆ ನಡೆಸುತ್ತಿರುವ ಹೊರಾಟಕ್ಕೆ ನಮ್ಮ ಬೆಂಬಲವಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಲೋಕಪಾಲ ಮಸೂದೆ ಮಂಡನೆಗೆ ಸಂಬಂಧಿಸಿದಂತೆ ವಿಶೇಷ ಅಧಿವೇಶನವನ್ನು ಕರೆಯಬೇಕು ಎಂದು ಪ್ರಧಾನಿಯವರಿಗೆ ಮನವಿ ಮಾಡಿದರು.






Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org