SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ಭಟ್ಕಳ: ರೋಟರಿಯಿಂದ ಪೋಲಿಯೊ ನಿರ್ಮೂಲನ ಸಂಕಲ್ಪ ಭಟ್ಕಳ: ರೋಟರಿಯಿಂದ ಪೋಲಿಯೊ ನಿರ್ಮೂಲನ ಸಂಕಲ್ಪ ================================================================================ yammar manvi on 29 July, 2010 09:23:00 ಭಟ್ಕಳ: ಉತ್ತರ ಕನ್ನಡ ಜಿಲ್ಲೆ ಆರೋಗ್ಯದ ದೃಷ್ಟಿಯಿಂದ ಬಹಳ ಹಿಂದೆ ಉಳಿದಿದೆ ಎಂದು ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎಮ್. ಸಯ್ಯದ್ ಖಲೀಲುರ್ರಹ್ಮಾನ್ ಹೇಳಿದರು. ಅವರು ಗುರುವಾರದಂದು ಇಲ್ಲಿನ ಲಲಿತಬಾಯಿ ಶಾನುಭಾಗ ಸಭಾಭವನದಲ್ಲಿ ಭಟ್ಕಳದ ರೋಟರಿ ಕ್ಲಬ್ ಹಮ್ಮಿಕೊಂಡಿದ್ದ ಪೋಲಿಯೊ ನಿರ್ಮೂಲನ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಆಸ್ಪತ್ರೆಗಳಿಲ್ಲ. ಇಲ್ಲಿ ಒಂದು ಮೆಡಿಕಲ್ ಕಾಲೇಜ್ ಸಹ ಇಲ್ಲ ಎಂದ ಅವರು ಜಿಲ್ಲೆಯ ಜನ ಮನಸ್ಸು ಮಾಡಿದರೆ ಒಂದು ಉತ್ತಮ ಮೆಡಿಕಲ್ ಕಾಲೇಜ್ ಸ್ಥಾಪಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಯಾಗಿ ಮಾತನಾಡಿದ ಶಾಸಕ ಜೆ.ಡಿ.ನಾಯ್ಕ ರೋಟರಿ ಕ್ಲಬ್ ಪೋಲಿಯೊ ನಿರ್ಮೂಲನಕ್ಕೆ ತೊಟ್ಟ ಸಂಕಲ್ಪ ನಿಜಕ್ಕೂ ಪ್ರಶಂಸನೀಯವಾದುದು ಎಂದ ಅವರು ಜನರ ಆರೋಗ್ಯದ ವಿಷಯದಲ್ಲಿ ರೋಟರಿ ಕ್ಲಬ್ ಗಣನೀಯವಾದ ಸೇವೆಯನ್ನು ಮಾಡುತ್ತಿದೆ ಎಂದರು. ಡಾ. ಝರ್ರಾರ್ ಮಾತನಾಡಿ ಭಟ್ಕಳದಲ್ಲಿ ನೀರು ಕಲೋಷಿತಗೊಂಡಿದ್ದು ಇದರಿಂದಾಗಿ ಹಲವಾರು ತರಹದ ರೋಗ ರುಜಿನಗಳು ಹುಟ್ಟಿಕೊಳ್ಳುತ್ತಿವೆ. ಇಲ್ಲಿ ತುರ್ತು ಆರೋಗ್ಯ ಸೇವೆಯ ಘಟಕಗಳು ಸ್ಥಾಪನೆಯಾಗಬೇಕು ಎಂದರು. ರೋಟರಿ ಜಿಲ್ಲಾ ಗರ್ವನರ್ ಮಹೇಶ್ ರಾಯ್ಕರ್, ರೋಟರಿ ಕ್ಲಬ್ ನ ಸಾಧನೆಗಳನ್ನು ವಿವರಿಸಿದರು. ಭಟ್ಕಳ ರೋಟರಿ ಕ್ಲಬ್ ಅಧ್ಯಕ್ಷ ನ್ಯಾಯವಾದಿ ಎಸ್.ಎಮ್ ಖಾನ್ ಸ್ವಾಗತಿಸಿದರು. ರೋಟಾರಿಯನ್ ಶ್ರೀನಿವಾಸ ಪಡಿಯಾರ್ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ರಾಜೇಶ್ ನಾಯ್ಕ ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ಪೋಲಿಯೊ ನಿರ್ಮೂಲನ ಅಭಿಯಾನಕ್ಕಾಗಿ ಸಂಗ್ರಹಸಿದ್ದ ೨.೩೦ಲಕ್ಷ ರೂಗಳನ್ನು ಜಿಲ್ಲಾ ಗರ್ವನರ್ ಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಭಟ್ಕಳ ಮರ್ಚಂಟ್ ಅಸೋಸಿಯೇಶನ್ ವತಿಯಿಂದ ರೂ ೨೫ ಸಾವಿರಗಳ ಚೆಕ್ ನ್ನು ನೀಡಲಾಯಿತು. ಮುಷ್ತಾಖ್ ಅಹ್ಮದ್ ಭಾವಿ ಕಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.