Home | ಉ.ಕ.ಜಿಲ್ಲಾ ವಾರ್ತೆ | ಭಟ್ಕಳ | ಸರ್ವಕೆಡುಕುಗಳ ಮೂಲ ಮದ್ಯಪಾನದಿಂದ ಮುಕ್ತಿ ನೀಡುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕೇಂದ್ರದ ನವಜೀವನ ಸಮಿತಿ

ಸರ್ವಕೆಡುಕುಗಳ ಮೂಲ ಮದ್ಯಪಾನದಿಂದ ಮುಕ್ತಿ ನೀಡುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕೇಂದ್ರದ ನವಜೀವನ ಸಮಿತಿ

Font size: Decrease font Enlarge font
image

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನವಜೀವನ ಸಮಿತಿಯು ಭಟ್ಕಳ ಮತ್ತು ಹೊನ್ನಾವರ ತಾಲೂಕಿನಾದ್ಯಂತ ನಡೆಸುತ್ತಿರುವ ಮದ್ಯವರ್ಧಕ ಶಿಬಿರಗಳಿಂದ ನೂರಾರು ಮಂದಿ ಪ್ರಯೋಜನ ಪಡೆದು ಈಗ ತಮ್ಮದೇ ಆದ ನವಜೀವನವನ್ನು ನಡೆಸುತ್ತಿದ್ದಾರೆ. ಮನಸ್ಸಿದ್ದರೆ ಮಾರ್ಗ ಎಂಬಂತೆ ಎಂತಹ ದುರ್ಗಮ ಸ್ಥಿತಿಯಲ್ಲೋ ಜೀವನ ನಿರ್ವಾಹಣೆಯ ಪಾಠವೇ ಇಲ್ಲಿನ ಶಿಬಿರಾರ್ಥಿಗಳಿಗೆ ನವಜೀವನ ನೀಡುತ್ತಿರುವುದು ವಿಶೇಷವಾಗಿದೆ.

*ಎಂ.ಆರ್.ಮಾನ್ವಿ
ಮದ್ಯಪಾನವನ್ನು ಸರ್ವ ಕೆಡುಕುಗಳ ತಾಯಿ ಎಂದೇ ಹೇಳಲಾಗುತ್ತದೆ. ಒಮ್ಮೆ ಈ ರೋಗ ಹತ್ತಿಕೊಂಡರೆ ಅದನ್ನು ಬಿಡುವುದು  ಕಷ್ಟ. ಎಷ್ಟೋ ಜನ ಮದ್ಯಪಾನಿಗಳು ಇದನ್ನು ಕೆಡುಕು ಎಂದೇ ತಿಳಿದು ಮತ್ತದಕ್ಕೆ ಅಂಟಿಕೊಂಡು ತಮ್ಮ ಜೀವನವನ್ನೆ ನರಕವನ್ನಾಗಿ ಮಾಡುಕೊಳ್ಳುತ್ತಾರೆ. ಈ ಮಾಹ ಜಾಡ್ಯದಿಂದ ಹೊರಬರಲು ಅದೆಷ್ಟೋ ಮಂದಿ ಪ್ರಯತ್ನಿಸುತ್ತಾರೆ. ಆದರೆ ಇದನ್ನು ಸಂಪೂರ್ಣವಾಗಿ ತ್ಯಜಿಸಲು ಆಗದೆ ಚಟಪಟಿಸುತ್ತಾರೆ. 
 
ಮದ್ಯಪಾನದಿಂದ ಮುಕ್ತರಾಗಲು ಹರಸಾಹಸ ಮಾಡಿಯೂ ಇದರಲ್ಲಿ ಯಶಸ್ಸು ಕಾಣದೆ ಮತ್ತೆ ಅದರ ದಾಸರಾಗಿ ಬಿಡುತ್ತಾರೆ. ಮದ್ಯಪಾನದಿಂದ ಮುಕ್ತರಾಗಬೇಕೆಂಬ ಅವರ ಕನಸು ಕನಸಾಗಿಯೆ ಉಳಿಯುತ್ತದೆ. ಇಂತಹದ್ದರಲ್ಲಿ   ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನವಜೀವನ ಸಮಿತಿಯು ಇಲ್ಲಿನ  ಮದ್ಯಪಾನಿಗಳ ಸಹಾಯಕ್ಕೆ ನಿಂತು ಎಷ್ಟೋ ಮಂದಿಯ ಕುಟುಂಬವನ್ನು ಕಾಪಾಡಿದ ಕೀರ್ತಿಗೆ   ಪಾತ್ರವಾಗಿದೆ. 
 
ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ ನವಜೀವನ ಸಮಿತಿಯು ಭಟ್ಕಳ ಮತ್ತು ಹೊನ್ನಾವರ ತಾಲೂಕಿನಾದ್ಯಂತ ನಡೆಸುತ್ತಿರುವ  ಮದ್ಯವರ್ಧಕ ಶಿಬಿರಗಳಿಂದ ನೂರಾರು ಮಂದಿ ಪ್ರಯೋಜನ ಪಡೆದು ಈಗ ತಮ್ಮದೇ ಆದ ನವಜೀವನವನ್ನು ನಡೆಸುತ್ತಿದ್ದಾರೆ. ಮನಸ್ಸಿದ್ದರೆ ಮಾರ್ಗ ಎಂಬಂತೆ ಎಂತಹ ದುರ್ಗಮ ಸ್ಥಿತಿಯಲ್ಲೋ ಜೀವನ ನಿರ್ವಾಹಣೆಯ ಪಾಠವೇ ಇಲ್ಲಿನ ಶಿಬಿರಾರ್ಥಿಗಳಿಗೆ ನವಜೀವನ ನೀಡುತ್ತಿರುವುದು ವಿಶೇಷವಾಗಿದೆ. 

ಪ್ರಪಂಚದ ಐದು ಮಾರಕ ರೋಗಗಳಲ್ಲಿ ಮದ್ಯಪಾನವು ಒಂದಾಗಿರುತ್ತದೆ. ಈ ಅಮಲು ರೋಗವು ಮನುಷ್ಯನ ದೈಹಿಕ ಮಾನಸಿಕ ಆರೋಗ್ಯವನ್ನು ಕೆಡಿಸಿ ಕೌಟುಂಬಿಕ, ಸಾಮಾಜಿಕ, ಆದ್ಯಾತ್ಮೀಕವಾಗಿ ಕೆಟ್ಟ ಪರಿಣಾಮವನ್ನು ಬೀರುದರೊಂದಿಗೆ ಆತನ ಘನತೆ  ಗೌರವಗಳನ್ನು ಬೀದಿಪಾಲು ಮಾಡುತ್ತದೆ.   ಅಮಲು ರೋಗಿ ತಾನು ಕೆಡುವುದರೊಂದಿಗೆ ತನ್ನ ಸ್ನೇಹಿತ, ಕುಟುಂಬ, ಸಮಾಜವನ್ನು ಕೆಡಿಸುತ್ತಾನೆ.  ಅಮಲಿನ ಅಭ್ಯಾಸದಲ್ಲಿ ನಿರತರಾದವರು ಕುಡಿತ ಎಂದಿಗೂ ಬೇಡ ಎನ್ನುವುದು ವಿರಳ.   

ಕುಡಿತಕ್ಕಾಗಿ ಜೀವ ಎಂಬಂತೆ ಜೀವಿಸುವ ರೋಗಿಗೆ ಸೂಕ್ತ ಪ್ರೇರಣೆ, ಮಾರ್ಗದರ್ಶನ, ಚಿಕಿತ್ಸೆ ನೀಡುವುದು ಸಮಾಜದ ಜನರ ಕರ್ತವ್ಯವಾಗಿದೆ. ಸಾಮಾಜಿಕ ಪಿಡುಗಾದ ಮದ್ಯವ್ಯಸನವನ್ನು ಸಮಾಜದ ಜನರ ಭಾಗವಹಿಸುವಿಕೆಯಮೂಲಕ ಹಾಗೂ ವೈದ್ಯಕೀಯ ಚಿಕಿತ್ಸೆ, ಮನರೋಗ ತಜ್ಞರ ಸಲಹೆ, ಮಾರ್ಗದರ್ಶನ ನೀಡಿ ರೋಗಿಯ ಸಮಸ್ಯೆಯಾದ ಒಬ್ಬಂಟಿತನ, ಜಿಗುಪ್ಸೆ ಕೋಪ, ನಿರಾಸೆ, ಕೀಳರಿಮೆ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ನಿವಾರಿಸುವುದು. ಕುಟುಂಬ ಹಾಗೂ ಸಮಾಜದಲ್ಲಿ ಸ್ಥಾನಮಾನ ಮತ್ತು  ಗೌರವಗಳನ್ನು ಕಲ್ಪಿಸುವುದು  ಶಿಬಿರದ ಉದ್ದೇಶವಾಗಿದೆ.    

ಈ ಶಿಬಿರಗಳಿಂದ ಅಮಲು ರೋಗಿಗಳು ಮದ್ಯವ್ಯಸನ ಮುಕ್ತರಾಗಿ ಜೀವನದಲ್ಲಿ ಆತ್ಮಸ್ಥೈರ್ಯ ತುಂಬಿ ಮುಂದೆ ನವಜೀವನ ಸಮಿತಿಗಳಲ್ಲಿ ಸೇರಿಕೊಂಡು ತಾವು ಸಂತೋಷದಿಂದ ಜೀವನ ನಡೆಸುವುದರೊಂದಿಗೆ, ಪರಿಸರದ ಮದ್ಯವ್ಯಸನಿಗಳ ಮೇಲೆ ಪ್ರಭಾವ ಬೀರಿ ಅವರನ್ನು ಪಾನಮುಕ್ತರನ್ನಾಗಿಸಲು ನೆರವಾಗುತ್ತದೆ.   


ಈ ಯೋಜನೆಯ ಉದ್ದೇಶಗಳಲ್ಲಿ ಪ್ರಮುಖವಾದುದು ಮದ್ಯಮುಕ್ತ ಸಮಾಜ ನಿರ್ಮಾಣ .  ‘ಮದ್ಯಪಾನವು ಭಾಗ್ಯದ ಪಾತ್ರೆಗೆ ಒಂದು ತೂತಿದ್ದಂತೆ.  ತೂತಿರುವ ಬಟ್ಟಲಿನಲ್ಲಿ ನೀರು ಹೇಗೆ ನಿಲ್ಲುವುದಿಲ್ಲವೋ, ಹಾಗೆಯೇ ಮದ್ಯವ್ಯಸನಿಯ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನಿಲ್ಲಲು ಸಾಧ್ಯವೇ ಇರುವುದಿಲ್ಲ’.  ಜೊತೆಯಲ್ಲಿ ಲೌಖಿಕ ಸಂಪತ್ತು ಅವನಿಂದ  ದೂರವಾಗುತ್ತದೆ.   ಅವನ ಕುಟುಂಬದ ಸದಸ್ಯರು ಕಣ್ಣ್ಣೀರಿನಲ್ಲಿ ಕೈ ತೊಳೆಯುವ ಹಂತಕ್ಕೆ ತಲುಪುವ ಸಾಧ್ಯತೆಗಳೂ ಇರುತ್ತದೆ.   

ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮನೆಭೇಟಿ ಸಮಾವೇಶ, ಮದ್ಯವರ್ಜನ ಶಿಬಿರ, ಗ್ರಾಮ ಸುಭೀಕ್ಷಾ ಕಾರ್ಯಕ್ರಮ, ನವಜೀವನ ಸಮಿತಿಯಂತಹ ಹತ್ತು ಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದೆ. 

ಇದುವರೆಗೆ ಭಟ್ಕಳ,ಹೊನ್ನಾವರ ತಾಲೂಕಿನಲ್ಲಿ ನಡೆದಿರುವ ಮದ್ಯವರ್ಜನೆ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಮರುಜೀವನ ಪಡೆದವರ ವಿವರ ಈ ಕೆಳಗಿನಂತಿದೆ. 

ಸರ್ಪನಕಟ್ಟೆ-೧, ಭಟ್ಕಳ-೨,  ಮುರ್ಡೇಶ್ವರ-೨, ಇಡಗುಂಜಿ-೧, ಹೊನ್ನಾವರ-೧, ಖರ್ವಾ-೧, ಹಳದೀಪುರ-೧, ಹೀಗೆ ಒಟ್ಟು ೯ ಮದ್ಯವರ್ಜನ ಶಿಬಿರಗಳನ್ನು ಹಮ್ಮಿಕೊಂಡು ಶಿಬಿರವನ್ನು ಯಶಸ್ವಿಗೊಳಿಸಲಾಗಿದೆ.  ಒಟ್ಟು -೫೩೮ ಜನ ಶಿಬಿರಾರ್ಥಿಗಳು ಪಾಲ್ಗೊಂಡು ಪಾನಮುಕ್ತ ಜೀವನ ನಡೆಸುತ್ತಿದ್ದಾರೆ.   ಮನೆ ಭೇಟಿ, ನವಜೀವನಸಮಿತಿ ಸಭೆ, ಸಮಾವೇಶ, ಈ ಎಲ್ಲಾ ಕಾರ್ಯಕ್ರಮಗಳ ಮೂಲಕ  ಪಾನಮುಕ್ತ ನವಜೀವನ ಸಮಿತಿಯ ಸದಸ್ಯರಿಗೆ ನಿರಂತರ ಜಾಗೃತಿ ಮೂಡಿಸಲಾಗುತ್ತಿದ್ದು, ೮೦% ರಷ್ಟು ಫಲಿತಾಂಶವನ್ನು ಕಾಯ್ದುಕೊಳ್ಳಲಾಗಿದೆ. ನವಜೀವನ ಸಮಿತಿಯ ಸದಸ್ಯರು ತಮ್ಮ ಕುಟುಂಬದ ಎಲ್ಲಾ ಸದಸ್ಯರೊಂದಿಗೆ ಸಂತಸದಿಂದ ಬಾಳ್ವೆ ಮಾಡುತ್ತಿದ್ದು, ಸಮಾಜದಲ್ಲಿಯೂ ಕೂಡಾ ಉನ್ನತ ಸ್ಥಾನಮಾನಗಳನ್ನು ಗಳಿಸುತ್ತಿದ್ದಾರೆ.   ಆ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೂ ಕೂಡಾ ಸಹಕಾರಿಯಾಗಿದೆ. 

ಮದ್ಯವರ್ಜನ ಶಿಬಿರಕ್ಕೆ ಸೇರಿ ಪಾನಮುಕ್ತ ಜೀವನವನ್ನು ನಡೆಸುವುದರೊಂದಿಗೆ ನವಜೀವನ ಸಮಿತಿಯ ಸದಸ್ಯರಾಗಿದ್ದುಕೊಂಡು ೬ ವ್ಯಕ್ತಿಗಳ ಚಿತ್ರಣಗಳನ್ನು ಈ ಕೆಳಗಿನಂತೆ ನೀಡಲಾಗಿದೆ. 

ಇದುವರೆಗೂ ಭಟ್ಕಳ   ಹೊನ್ನಾವರ ತಾಲೂಕಿನಲ್ಲಿ ಸುಮಾರು ೨೬೦೦ಕ್ಕೂ ಹೆಚ್ಚು ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗಿದ್ದು ಇದರಲ್ಲಿ ಭಾಗವಹಿಸಿ ತಮ್ಮ ಜೀವನದಲ್ಲಿ ನವಜನ್ಮ ಪಡೆದು ಮದ್ಯವ್ಯಸನಿಗಳನ್ನು ಪಾನಮುಕ್ತರನ್ನಾಗಿ ಮಾಡಲು ಪಣತೊಟ್ಟಿರುವ ಕೆಲವು ಮಂದಿಯ ಬದುಕು ಹೀಗಿದೆ.  

೧. ನಾಗರಾಜ ಕಂಚುಗಾರ: ನಾಗರಾಜರವರು ೮ನೇ ತರಗತಿ ಓದಿಕೊಂಡಿದ್ದು, ತನ್ನ ೧೪ನೇ ವಯಸ್ಸಿನಿಂದಲೇ ಮದ್ಯ ವ್ಯಸನಿಯಾಗಿ ಕೆಂಪು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿದ್ದು ಬಂದ ಹಣವನ್ನು ಸರಾಯಿ ಅಂಗಡಿಗೆ ಹಾಕುತ್ತಿದ್ದರು.   ಹಾಗೂ ಹೆಂಡತಿಯ ರೂ. ೯೦,೦೦೦.೦೦ ಚಿನ್ನವನ್ನು ಬ್ಯಾಂಕಿನಲ್ಲಿ ಅಡವಿಟ್ಟು ಆ ಹಣವನ್ನು ಸಹ ಸರಾಬು ಅಂಗಡಿಗೆ ಹಾಕಿ ತಮ್ಮ ಜೀವನವನ್ನು ಸರಾಬು ಅಂಗಡಿಗೆ ಅಡವಿಟ್ಟುಕೊಂಡರು.   ನಾಗರಾಜರವರು ಭಟ್ಕಳ ವಲಯದಲ್ಲಿ ನಡೆದ ೪೩೭ ನೇ  ಮದ್ಯವರ್ಜನ ಶಿಬಿರಕ್ಕೆ ಸೇರಿ ಪಾನಮುಕ್ತರಾಗಿ ನವಜೀವನ ಸಮಿತಿಯ ಭಟ್ಕಳ ವಲಯ ಮಟ್ಟದ ಅಧ್ಯಕ್ಷರಾಗಿ ಆಯ್ಕೆ ಆಗಿರುತ್ತಾರೆ.   ನಂತರ ತಮ್ಮ ಬದುಕನ್ನು ಬದಲಾಯಿಸಿಕೊಂಡ ನಾಗರಾಜರವರು ಸ್ವಂತ ಕೆಂಪು ಕಲ್ಲಿನ ಕೋರೆಯನ್ನು  ಪ್ರಾರಂಭಿಸಿ  ರೂ. ೨,೪೦,೦೦೦.೦೦ ದಿಂದ ೨ ಕಲ್ಲು ಕೋರೆ ಮಷಿನ್‌ನನ್ನು ಖರೀದಿಸಿ ೨೦ ಜನ ಆಳುಗಳನ್ನು ಇಟ್ಟುಕೊಂಡು ತಿಂಗಳಿಗೆ ಎಲ್ಲ ಖರ್ಚು-ವೆಚ್ಛಗಳನ್ನು ಕಳೆದು ರೂ. ೮೦,೦೦೦.೦೦ ಆದಾಯ ಪಡೆಯುತ್ತಾರೆ.   
 
೨. ಮಾದೇವ ಸಣ್ಣುಗೊಂಡ: ಸರ್ಪನಕಟ್ಟೆ ವಲಯದ ಮಾರುಕೇರಿ ವಿಭಾಗದ ಕೋಟಖಂಡ ಎಂಬ ಗ್ರಾಮದಲ್ಲಿ ವಾಸವಾಗಿರುವ ಮಾದೇವ ಸಣ್ಣು ಗೊಂಡ ರವರು ಸುಮಾರು ೨೦ ವರ್ಷಗಳಿಂದ ಕುಡಿತ ಪ್ರಾರಂಭ ಮಾಡಿದ ಇವರು ೧೭ ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  
ಪ್ರಸ್ತುತ ೨ ವರ್ಷಗಳ ಹಿಂದೆ ಮದ್ಯವರ್ಜನ ಶಿಬಿರಕ್ಕೆ ಸೇರಿ ಕುಡಿತವನ್ನು ಬಿಟ್ಟು ನವಜೀವನ ನಡೆಸುತ್ತಿರುವ ಮಾದೇವ ಸಣ್ಣು ಗೊಂಡರವರು ೩ ಲಕ್ಷ ಖರ್ಚು ಮಾಡಿ ಒಂದು ಸುಂದರವಾದ ಮನೆ ರಚಿಸಿರುತ್ತಾರೆ.  ಹಾಗೂ ಪ್ರತಿ ದಿನ ಗೊನೆ ಕೊಯ್ಯುವ ಕೆಲಸದಿಂದ ರೂ. ೨೦೦ ರಿಂದ ರೂ. ೨೫೦ ಆದಾಯ ಬರುತ್ತಿದ್ದು ೧೦ ಗುಂಟೆ ಜಾಗದಲ್ಲಿ ಅಡಿಕೆ ಬೆಳೆ ಇದ್ದು ಪ್ರತಿ ವರ್ಷ ೧ ಕ್ವಿಂಟಲ್ ನಷ್ಟು ಅಡಿಕೆ ಬೆಳೆಯುತ್ತಿದ್ದಾರೆ.   
   
೩. ದಯಾನಂದ ಆಚಾರಿ: ಹೊನ್ನಾವರ ತಾಲೂಕಿನ ಹಳದೀಪುರ ವಲಯದ ಚಂದಾವರ ಗ್ರಾಮದ ದಯಾನಂದ ಆಚಾರಿಯವರು ಪ್ರಮುಖರು.  ಅಂದು ತಾನು ಮದ್ಯ ಕುಡಿಯಲಿಕ್ಕಾಗಿಯೇ ಹುಟ್ಟಿದವನೆಂದು ತಿಳಿದುಕೊಂಡಿದ್ದರು. ತಾನು ದುಡಿಯುವುದೇ ಅಪರೂಪವಾದರೂ ತನ್ನ ಪತ್ನಿ ಕೂಲಿ ಮಾಡಿ ಸಂಸಾರ ಸಾಗಿಸಲು ಸಂಪಾದಿಸಿದ ಅಲ್ಪ-ಸ್ವಲ್ಪ ಹಣವನ್ನು, ಪತ್ನಿ ಯನ್ನು ಪೀಡಿಸಿ ಕಸಿದುಕೊಂಡು ತನ್ನ ಚಟಕ್ಕಾಗಿ ವ್ಯಯಿಸುತ್ತಿದ್ದರು. ಇವರ ಸಂಸಾರದ ವ್ಯಥೆಯನ್ನು ಅರ್ಥಮಾಡಿಕೊಂಡು ಗ್ರಾಮಾಭಿವೃದ್ಧಿಯ ಕಾರ್ಯಕರ್ತರು ಇವರ ಕುಡಿತವನ್ನು ಬಿಡಿಸಬೇಕೆಂದು ಪಣ ತೊಟ್ಟು   ಹೊನ್ನಾವರದ ಹಳದೀಪುರ ಗ್ರಾಮದಲ್ಲಿ ನಡೆದ ಮದ್ಯವರ್ಜನಾ ಶಿಬಿರಕ್ಕೆ ಸೇರಿಸಿದರು.  ಇದಕ್ಕೆ ಇವರ ಪತ್ನಿ ಪೂರ್ಣ ಸಹಕಾರ ನೀಡಿದರು.   ದಯಾನಂದ ರವರು ಶಿಬಿರಕ್ಕೆ ಸೇರಿ ಮನ ಪರಿವರ್ತನೆಗೊಂಡು  ಈದೀಗ ಪರಿಶುದ್ಧ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.    
 
ಅವರ ಪತ್ನಿ ದೀಪಾರವರು  ಸ್ವ ಸಹಾಯ ಸಂಘದ ಸದಸ್ಯರಾಗಿರುವುದರಿಂದ ಸಂಘದಲ್ಲಿ ರೂ. ೧,೫೦,೦೦೦.೦೦ ಪ್ರಗತಿನಿಧಿಯನ್ನು ಪಡೆದು ಮನೆ ನಿರ್ಮಿಸಿದ್ದು, ದಯಾನಂದರವರು ಉದ್ಯೋಗ (ಆಚಾರಿ ಕುಲುಮೆ) ಕೆಲಸವನ್ನು ಮಾಡುತ್ತಿದ್ದು, ಇದರಿಂದ ಅವರಿಗೆ ದಿನವೊಂದಕ್ಕೆ  ರೂ. ೨೦೦.೦೦ ರಿಂದ ರೂ. ೩೦೦.೦೦ ಆದಾಯ ಲಭ್ಯವಾಗುತ್ತಿದೆ. ಈದೀಗ ಹೊಸ ಮನೆಯನ್ನು ನಿರ್ಮಾಣ ಮಾಡಿ ಈ ಮನೆಯಲ್ಲೇ ನವಜೀವನ ನಡೆಸುತ್ತಿರುವ ದಯಾನಂದರವರು ತಮ್ಮ        ೨ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುತ್ತಿದ್ದಾರೆ. ಮತ್ತು ನವಜೀವನ ಸಮಿತಿ ಸಭೆಯಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದಾರೆ.   ಇದರೊಂದಿಗೆ  ತನ್ನ ಬದಲಾವಣೆಗೆ ಕಾರಣೀಕರ್ತರಾದ ಪತ್ನಿ ಹಾಗೂ ಯೋಜನೆಯ ಕಾರ್ಯಕರ್ತರು ಮತ್ತು ಒಕ್ಕೂಟದವರ ಸಹಾಯವನ್ನು ಸ್ಮರಿಸುತ್ತಾ ಪತ್ನಿ ಮತ್ತು ಸುಖಿ ಸಂಸಾರ ನಡೆಸುತ್ತಿದ್ದಾರೆ.    
 
ತಾನು ಮಾತ್ರ ಬದಲಾಗುವುದಲ್ಲದೇ ತನ್ನ ಜೊತೆಗೆ ತನ್ನ ಸ್ನೇಹಿತರನ್ನು ಜೂನ್ ತಿಂಗಳಲ್ಲಿ ನಡೆಯುವ ಮದ್ಯವರ್ಜನ ಶಿಬಿರಕ್ಕೆ ಸೇರಿಸುವ ನಿಟ್ಟಿನಲ್ಲಿ ಕಾರ್ಯಪವರ್ತರಾಗಿದ್ದಾರೆ.    
 
೪. ನಾಗೇಶ್ ಕೇಶವ ನಾಯ್ಕ: ಇಡಗುಂಜಿ ವಲಯದ ಕುದ್ರಿಗಿ ಕಾರ್ಯಕ್ಷೇತ್ರದಲ್ಲಿ ಬರುವ ಮಾಗೋಡ ಗ್ರಾಮದ ನಾಗೇಶ ಕೇಶ ನಾಯ್ಕ ಇವರು ತನ್ನ ೨೫ನೇ ವಯಸ್ಸಿನಲ್ಲಿ ಕುಡಿತದ ಚಟಕ್ಕೆ ನಿಲುಕಿ  ತುಂಬ ಕುಡಿಯುತ್ತಿದ್ದ ಇವರು ದಿನವಿಡಿ ದುಡಿದ ಹಣವನ್ನು ಕುಡಿದು ಖಾಲಿ ಮಾಡುತ್ತಿದ್ದರು.  ಆದರೆ ಇವರು ಶಿಬಿರಕ್ಕೆ  ಸೇರಿ ಕುಡಿತದ ಚಟವನ್ನು ಬಿಟ್ಟು ೨ ವರ್ಷದಿಂದ ಹೊಸ ಜೀವನ ನಡೆಸುತ್ತಾ ಬಂದಿದ್ದು, ಕಾಂಕ್ರೇಟ್ ಮನೆ ರಚನೆ ಮಾಡಿದ್ದು, ಮತ್ತು ಗಂಡ ಹೆಂಡತಿ ಇಬ್ಬರೇ ಸೇರಿ ೩೦ ಅಡಿ ಬಾವಿ ತೆಗೆದಿದ್ದು ಮತ್ತು ಯೋಜನೆಯ ಸಹಾಯದಿಂದ ಗೋಬರ್ ಗ್ಯಾಸ್ ರಚನೆ ಮಾಡಿದ್ದು, ಮತ್ತು ಇವರ ೨ ಗಂಡು ಮಕ್ಕಳು ಗೋವಾದಲ್ಲಿ ಸ್ವಂತ ಬೇಕರಿ ಅಂಗಡಿಯನ್ನು ಮಾಡಿರುತ್ತಾರೆ.      ಈಗ  ನಾಗೇಶರವರು  ತುಂಬ ಬದಲಾಗಿದ್ದು ಆ ಗ್ರಾಮಕ್ಕೆ ಮಾದರಿ ವ್ಯಕ್ತಿಯಾಗಿರುತ್ತಾರೆ.   
 
೫. ಸುಬ್ರಾಯ ನಾಯ್ಕ: ಹೊನ್ನಾವರ ತಾಲೂಕಿನ ಇಡಗುಂಜಿ ವಲಯದ  ಇಡಗುಂಜಿ ಕಾರ್ಯಕ್ಷೇತ್ರದ ಮೋಳ್ಕೋಡು ಗ್ರಾಮದ ಸದಸ್ಯರಾದ ಸುಬ್ರಾಯ ನಾಯ್ಕ ಇವರು ೨೦ ನೇ ವಯಸ್ಸಿನಲ್ಲಿ ಕುಡಿತದ ಚಟಕ್ಕೆ ನಿಲುಕಿ ದಿನವಿಡಿ ದುಡಿದ ಸಂಬಳವನ್ನು ಇವರ ಕುಡಿತಕ್ಕೆ ಸಾಲುತ್ತಿರಲಿಲ್ಲ. ಕುಡಿದು ಬಂದು ಮನೆಯಲ್ಲಿ ಹೆಂಡತಿ ಮಕ್ಕಳಿಗೆ ಹೊಡೆಯುತ್ತಿದ್ದಾರೆ.   ಇದರಿಂದ ಬೇಸತ್ತ ಇವರ ಹೆಂಡತಿ ಗ್ರಾಮಾಭಿವೃದ್ಧಿ ಯೊಜನೆಯ ಇಡಗುಂಜಿ ವಲಯದ ಬಳಕೂರು ಕಾರ್ಯಕ್ಷೇತ್ರದಲ್ಲಿ ಮದ್ಯವರ್ಜನ ಶಿಬಿರಕ್ಕೆ ತನ್ನ ಗಂಡನನ್ನು ಸೇರಿಸುವ ಬಗ್ಗೆ ವ್ಯಕ್ತಪಡಿಸಿದರು.   ಆದರೆ ಕರೆದುಕೊಂಡು ಹೋಗಲು ಇವರು ಒಪ್ಪುತ್ತಿರಲಿಲ್ಲ.  ಇದಕ್ಕೆ  ಶ್ರೀ ವಿನಾಯಕ ತಂಡದ ಸದಸ್ಯರಾದ ಗೋವಿಂದ ಗೌಡ ಇವರು ಕರೆದುಕೊಂಡು ಹೋಗಿ ಶಿಬಿರಕ್ಕೆ ಸೇರ್ಪಡೆ ಮಾಡಿದರು.  ಇದರಿಂದ ಇವರ  ಮನೆ ಹಂತ ಹಂತವಾಗಿ ಅಭಿವೃದ್ಧಿ ಹೊಂದಿ ಹೊಸ ಮನೆಯನ್ನು ರಚನೆ ಮಾಡಿದರು.  ಇದು ಗ್ರಾಮಾಭಿವೃದ್ಧಿ ಯೋಜನೆ ರಚಿಸಿದ ಶಿಬಿರದಿಂದ ಸಾಧ್ಯವಾಯಿತು.  ಇನ್ನು ಮುಂದಿನ ದಿನದಲ್ಲಿ ಒಳ್ಳೆಯ ಅಭಿವೃದ್ಧಿ ಯಾಗುತ್ತೇವೆ.  ಎಂದು ತಿಳಿಸಿದರು.    
 
೬.ಸುಬ್ರಾಯ ನಾಯ್ಕ ಗಡೀನ್ಬಾಳ:  ಹೊನ್ನಾವರ ವಲಯದ ಹಡಿನಬಾಳ ಕಾರ್ಯಕ್ಷೇತ್ರದ ಹಾಡಗೇರಿಯಲ್ಲಿ ವಾಸವಾಗಿರುವ ಸುಬ್ರಾಯ ನಾಯ್ಕ ಇವರು ೨೦೧೨-೧೩ನೇ ಸಾಲಿನಲ್ಲಿ ಕರ್ಕಿಯಲ್ಲಿ ನಡೆದ ೪೩೯ನೇ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಕುಡಿತವನ್ನು ಬಿಟ್ಟು ಹಡಿನಬಾಳದ ಜ್ಞಾನೇಶ್ವರಿ ಸಮಿತಿಯ ಸದಸ್ಯರಾಗಿ ಕಾರ್ಯಕ್ಷೇತ್ರದಲ್ಲಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಇವರು ಮೀನು ವ್ಯಾಪಾರ ಮಾಡುತ್ತಿದ್ದು, ಹಿಂದೆ ಬೈಕ್‌ನ್ನು ಹೊಂದಿದ್ದು, ಕುಡಿತ ಬಿಟ್ಟು ನವಜೀವನ ಸಮಿತಿಯ ಸದಸ್ಯರಾದ ನಂತರ ಈ ಮೊದಲು ದಿನದಲ್ಲಿ ಆದ ರೂ. ೧೦೦೦.೦೦ ವ್ಯಾಪಾರದಲ್ಲಿ ಸುಮಾರು ರೂ. ೫೦೦.೦೦ ಕುಡಿತಕ್ಕೆ ಉಪಯೋಗಿಸುತ್ತಿದ್ದರು.  
 
ಕುಡಿತ ಬಿಟ್ಟ ನಂತರ ವ್ಯಾಪಾರದಲ್ಲಿ ಆದ ಹಣವನ್ನು ಉಳಿತಾಯದ ಖಾತೆ ಮಾಡಿ ಬ್ಯಾಂಕ್ ಪಾಸ್ ಪುಸ್ತಕದಲ್ಲಿರುವ ಈ ತನಕದ ಒಟ್ಟು ರೂ. ೩,೨೫,೦೦೦.೦೦ ಹಣವನ್ನು ಗಳಿಕೆ ಮಾಡಿದ್ದು, ಹೊಸ ಬೈಕ್‌ನ್ನು ಖರೀದಿ ಮಾಡಿರುತ್ತಾರೆ.   ಕುಡಿತ  ಬಿಟ್ಟ ನಂತರ ಇವರ ಹೆಂಡತಿ ಶ್ಯಾಲಿನಿ ನಾಯ್ಕ ಇವರು ಪ್ರಸ್ತುತ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಆಯ್ಕೆ ಆಗಿರುತ್ತಾರೆ.  ಕೆಲವೊಂದು ಎಲ್.ಐ.ಸಿ. ಪಾಲಿಸಿಯನ್ನು ಮಾಡಿಸಿರುತ್ತಾರೆ.  ಒಂದು ಗಂಡು ಮತ್ತು ಒಂದು ಹೆಣ್ಣು ಮಗಳನ್ನು ಹೊಂದಿದ್ದು, ಇವರು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಈಗ ಸಮಾಜದಲ್ಲಿ ಉನ್ನತ ಸ್ಥಾನವನ್ನು ಹೊಂದಿರುತ್ತಾರೆ.  


Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Tags
No tags for this article
Rate this article
0
Powered by SahilOnline.org